ಆಯುರ್ವೇದವು ಆರೋಗ್ಯಕರ ಹಾಗೂ ದೀರ್ಘಾಯುಷ್ಯದ ಜೀವನಕ್ಕೆ ಮಾರ್ಗದರ್ಶನ ನೀಡುವ ಪ್ರಾಚೀನ ವೈದ್ಯಕೀಯ ವಿಜ್ಞಾನವಾಗಿದೆ. ಆಯುರ್ವೇದದ ಪ್ರಕಾರ ಮಾನವ ದೇಹವು ಪಂಚಮಹಾಭೂತಗಳಿಂದ ರೂಪುಗೊಂಡಿದ್ದು, ವಾತ, ಪಿತ್ತ ಮತ್ತು ಕಫ ಎಂಬ ತ್ರಿದೋಷಗಳು ದೇಹದ ವಿವಿಧ ಕ್ರಿಯೆಗಳನ್ನು ನಿಯಂತ್ರಿಸುತ್ತವೆ. ಇವುಗಳ ಸಮತೋಲನವೇ ಉತ್ತಮ ಆರೋಗ್ಯದ ಪ್ರಮುಖ ಆಧಾರವಾಗಿದ್ದು, ಅಸಮತೋಲನವು ವಿವಿಧ ರೋಗಗಳಿಗೆ ಕಾರಣವಾಗುತ್ತದೆ.
ದೇಹದ ಪೋಷಣೆ ಮತ್ತು ಧಾರಣೆಗೆ ರಸ, ರಕ್ತ, ಮಾಂಸ, ಮೇದ, ಅಸ್ಥಿ, ಮಜ್ಜೆ ಹಾಗೂ ಶುಕ್ರ ಎಂಬ ಸಪ್ತಧಾತುಗಳು ಪ್ರಮುಖ ಪಾತ್ರವಹಿಸುತ್ತವೆ. ಅದೇ ರೀತಿ ಪುರೀಷ, ಮೂತ್ರ ಮತ್ತು ಸ್ವೇದ ಎಂಬ ಮಲಗಳು ದೇಹದ ತ್ಯಾಜ್ಯಗಳನ್ನು ಹೊರಹಾಕುವ ಮೂಲಕ ಆರೋಗ್ಯ ಕಾಪಾಡುತ್ತವೆ. ಹೀಗಾಗಿ ದೋಷಗಳು ದೇಹದ ಕ್ರಿಯೆಗಳನ್ನು ನಿರ್ವಹಿಸುವ ಅಂಶಗಳಾಗಿದ್ದರೆ, ಧಾತುಗಳು ದೇಹಕ್ಕೆ ಆಧಾರಸ್ತಂಭಗಳಾಗಿವೆ ಮತ್ತು ಮಲಗಳು ದೇಹಶುದ್ಧಿಗೆ ಅಗತ್ಯವಾದವುಗಳಾಗಿವೆ.
ಆಯುರ್ವೇದದ ಚಿಕಿತ್ಸೆಯು ಕೇವಲ ಔಷಧ ಸೇವನೆಗೆ ಸೀಮಿತವಾಗಿರದೆ, ಆಹಾರ, ದಿನಚರಿ, ಋತುಚರ್ಯೆ, ಪಥ್ಯ, ಜೀವನಶೈಲಿ, ಮಾನಸಿಕ ಆರೋಗ್ಯ ಹಾಗೂ ಅಗತ್ಯವಿದ್ದಲ್ಲಿ ಪಂಚಕರ್ಮದಂತಹ ಶೋಧನಾ ವಿಧಾನಗಳನ್ನು ಒಳಗೊಂಡಿದೆ. ಆದ್ದರಿಂದ ದೋಷ, ಧಾತು ಮತ್ತು ಮಲಗಳ ಸಮಸ್ಥಿತಿಯನ್ನು ಕಾಪಾಡಿಕೊಳ್ಳುವುದೇ ಆರೋಗ್ಯಕರ ಹಾಗೂ ಸುಸ್ಥಿರ ಜೀವನದ ಮೂಲತತ್ವವಾಗಿದೆ.
ಆಯುರ್ವೇದದ ಉಗಮ ಸಾವಿರಾರು ವರ್ಷ ಹಿಂದಕ್ಕೆ ಹೋಗುತ್ತದೆ. ಅಥರ್ವವೇದದಲ್ಲಿ ಮೊದಲ ವೈದ್ಯಕೀಯ ವಿಜ್ಞಾನ ಹಾಗೂ ಆಯುರ್ವೇದದ ಪ್ರಸ್ತಾಪ ಸಿಗುತ್ತದೆ. ಇತರ ವೇದಗಳಲ್ಲಿಯೂ ವೈದ್ಯಕ ವಿಜ್ಞಾನ ಹಾಗೂ ಆಯುರ್ವೇದದ ಪ್ರಸ್ತಾಪಗಳಿವೆ. ಹೀಗೆ ಮುಂದುವರಿದು ನಂತರ ಚರಕ ಮುಂತಾದ ಸಂಹಿತೆಗಳಲ್ಲಿ ವಿಜ್ಞಾನ ಮುಂದುವರೆಯಿತು.ಆಯು ಎಂದರೆ ಜೀವನ,
ವೇದವೆಂದರೆ ಜ್ಞಾನ. ಆರೋಗ್ಯಕರ ಜೀವನಕ್ಕಾಗಿ ಇರುವ ವಿಜ್ಞಾನವೆ ಆಯುರ್ವೇದ.
ಆಯುರ್ವೇದ ಅವತರಣ
ಆಯುರ್ವೇದ ಸಂಹಿತೆಯ ಪ್ರಕಾರ ಆಯುರ್ವೇದವನ್ನು ಬ್ರಹ್ಮದೇವನು ತನ್ನ ನೆನಪಿನಾಳದಿಂದ ಪುನಃಸ್ಮರಿಸಿ ದಕ್ಷಪ್ರಜಾಪತಿಗೆ ನೀಡಿದರು, ನಂತರ ದಕ್ಷಪ್ರಜಾಪತಿ ಅಶ್ವಿನಿಕುಮಾರರಿಗೆ ನೀಡಿದರು, ಅವರಿಂದ ಅದು ಇಂದ್ರನಿಗೆ ದೊರೆಯಿತು.ಭೂಲೋಕದಲ್ಲಿ ಕಾಲಕ್ರಮೇಣ ಸರಿಯಾದ ರೀತಿಯಲ್ಲಿ ಜೀವಿಸಿ ಉತ್ತಮ ಆರೋಗ್ಯವನ್ನು ಹೊಂದಿದ್ದ ಮುನಿಗಳಿಗೆ ಗ್ರಾಮ್ಯಧರ್ಮಪಾಲನೆಯಿಂದ ಅನೇಕ ರೋಗ ರುಜೀನಗಳು ಬರಲಾರಂಭಿಸಿತು. ಆಗ ಪರಿಹಾರ ಹುಡುಕಲು ಮುನಿಗಳೆಲ್ಲ ಹಿಮಾಲಯದಲ್ಲಿ ಮೊದಲ ವೈದ್ಯಕೀಯ ಸಮ್ಮೇಳನ ಆಯೋಜಿಸಿದರು. ಕೆಲವು ಹಿರಿಯರನ್ನು ಆರಿಸಿ ಇಂದ್ರನ ಬಳಿ ಕಳಿಸಲಾಯಿತು. ಈ ಸಂಧರ್ಭದಲ್ಲಿ ಇಂದ್ರ ಆಯುರ್ವೇದ ಶಾಸ್ತ್ರವನ್ನು ಮುನಿಗಳಿಗೆ ಉಪದೇಶಿಸದರು. ನಂತರ ಆತ್ರೇಯನಿಂದ ಅಗ್ನಿವೇಶಾದಿ, ದಿವೋದಾಸದಿಂದ ಸುಶೃತಾದಿಗಳಿಗೂ ಮುಂದುವರೆದು ವಿದ್ಯಾಪರಂಪರೆಯು ಬೇರೆ ಬೇರೆ ವಿಭಾಗಗಳಲ್ಲಿ ಪರಿಣತಿ ಪಡೆಯಿತು. ಈ ರೀತಿ ಆಯುರ್ವೇದ ಶಾಸ್ತ್ರದೇವಲೋಕದಿಂದ ಭೂಲೋಕಕ್ಕೆ ಅವತರಿಸಿತು, ಮಾನವರಿಗೆ ದೊರೆಯಿತು.
ಆಯುರ್ವೇದಕ್ಕೆ ಶೈಕ್ಷಣಿಕ ಪದ್ದತಿಗ ಸುಮಾರು ೧೯೭೫ರ ನಂತರ ನಿಯಮಗಳು ರೂಪುಗೊಂಡು, ಸರ್ಕಾರಿ ಸಂಸ್ಥೆಗಳು, ಆಸ್ಪತ್ರೆ, ಇತ್ಯಾದಿಗಳು ಬಂದವು. ಹೀಗೆ ಆಯುರ್ವೇದ ಕಾಲ ಕ್ರಮೇಣ ರಾಷ್ಟೀಯ ಹಾಗು ಅಂತರಾಷಷ್ಟೀಯ ಮಟ್ಟದಲ್ಲಿ ಅಭಿವ್ರಿಧಿ ಮಾಡತೊಡಯಿತು.
ಆಯುರ್ವೇದದ ಉದ್ದೇಶ
ಆಯುರ್ವೇದದ ಮುಖ್ಯ ಉದ್ದೇಶ ಆರೋಗ್ಯದ ಪರಿಪಾಲನೆ ಮತ್ತು ವ್ಯಾಧಿಗಳ ಚಿಕಿತ್ಸೆ. ಆದ್ದರಿಂದ ಆಯುರ್ವೇದದ ಅರ್ಧ ಪ್ರತಿಶತ ಆರೋಗ್ಯವಂತರಿಗಾಗಿ ಆರೋಗ್ಯದ ಪಾಲನೆ ಸಂಭಂದಪಟ್ಟ ಸಲಹೆಗಳು ಮತ್ತು ಆರೋಗ್ಯವನ್ನು ಉತ್ತಮಪಡಿಸುವ ಕ್ರಮಗಳು, ಉಳಿದ ಅರ್ಧ ಪ್ರತಿಶತ ಖಾಯಿಲೆಗಳು ಮತ್ತು ಅವುಗಳ ಚಿಕಿತ್ಸೆಯ ವಿವರಣೆಗಳು.
ಆರೋಗ್ಯದ ಪಾಲನೆ ದಿನಚರಿ,ಕಾಲಕ್ಕೆ ತಕ್ಕಂತೆ ದೇಹಶೋಧನಾ ವಿಧಾನಗಳು, ಆಹಾರಸೇವನಾಕ್ರಮ, ಸದ್ವರ್ತನೆ, ಆರೋಗ್ಯಕರ ನಿದ್ರೆಯ ಪಾಲನೆ, ಉತ್ತಮ ಲೈಂಗಿಕ ಕ್ರಮಗಳು, ಗರ್ಭಿಣಿ ಸ್ವಾಸ್ಥ್ಯಮತ್ತು ಶಿಶುವಿನ ಆರೋಗ್ಯ ರಕ್ಷಣೆ, ಧಾರಣಿ ಮಾಡಬೇಕಾದ ಮಾನಸಿಕ ವೇಗಗಳು ( ಕಾಮ, ಕ್ರೋಧ, ಲೋಭ ಇತ್ಯಾದಿ)ಹಾಗೂ ಧಾರಣೆ ಮಾಡಬಾರದ ದೈಹಿಕ ವೇಗಗಳು (ಹಸಿವು, ಬಾಯಾರಿಕೆ, ಆಕಳಿಕೆ, ಕೆಮ್ಮು ಇತ್ಯಾದಿ). ದೈಹಿಕ-ಮಾನಸಿಕ ಖಾಯಿಲೆಗಳ ಕಾರಣ-ರೂಪ ವಿವರಿಸಿ ಚಿಕಿತ್ಸೆಯನ್ನು ನಮ್ಮ ಋಷಿ ಮುನಿಗಳು ಹೇಳಿದ್ದಾರೆ. ಆಯುರ್ವೇದ ಚಿಕಿತ್ಸೆಯೆಂದರೆ ಔಷಧ ಸೇವನೆಯ ಜೊತೆಗೆ ಪಥ್ಯ, ಜೀವನಶೈಲಿಯಲ್ಲಿ ಬದಲಾವಣೆ. ಔಷಧಸೇವನೆ, ಶರೀರ ಶೋಧನೆ (ಪಂಚಕರ್ಮ ಇತ್ಯಾದಿ) ಇತ್ಯಾದಿಗಳನ್ನು ಅಗತ್ಯಕ್ಕೆ ತಕ್ಕಂತೆ ನೀಡಲಾಗುತ್ತದೆ.
ದೇಹ - ಪಂಚಮಹಾಭೂತ
ಪಂಚಮಹಾಭೂತ ಎಂದರೆ ೫ ಬಗೆಯ ದ್ರವ್ಯಗಳು. ಪೃಥ್ವಿ, ಜಲ, ಅಗ್ನಿ, ವಾಯು,ಆಕಾಶ.
ಪೃಥ್ವಿ- ಅಸ್ತಿ ಮುಂತಾದ ಘನ ದ್ರವ್ಯಗಳು. ಜಲ - ದೇಹದಲ್ಲಿನ ಜೊಲ್ಲು, ಕಣ್ಣೀರು, ರಕ್ತ ಇತ್ಯಾದಿ ದ್ರವ್ಯಗಳು.ಅಗ್ನಿ- ದೇಹದ ಉಷ್ಣತೆ, ಜರಣಕ್ರೀಯೆ,ಮೈಬಣ್ಣ ಇತ್ಯಾದಿ. ವಾಯು - ಉಸಿರು, ಚಲನಾತ್ಮಕತೆ, ದೇಹದಲ್ಲಿರುವ ಅನಿಲಗಳು ಇತ್ಯಾದಿ. ಆಕಾಶ- ದೇಹದ ರಂಧ್ರಗಳು.ದ್ರವ್ಯದಲ್ಲಿ ಎಲ್ಲಾ ಮಹಾಭೂತಗಳಿದ್ದರೂ ಪ್ರಧಾನವಾದವನ್ನು ಮಾತ್ರ ಮುಖ್ಯದ್ರವ್ಯಗಳಾಗಿ ಪರಿಗಣಿಸಲಾಗುತ್ತದೆ.
ಮಹಾಭೂತಗಳು ಯಾವ ಪ್ರಮಾಣದಲ್ಲಿ ಸಂಯೋಗ ಹೊಂದಿವೆ ಅದರ ಪ್ರಕಾರ ದ್ರವ್ಯಗಳ ಗುಣ-ಸ್ವಭಾವಗಳು ವ್ಯತ್ಯಾಸವಾಗುತ್ತವೆ. ಉದಾ: ಪೃಥ್ವಿ ಮತ್ತು ಜಲ ಸಂಯೋಗದಿಂದ ಮಾಂಸ.
ಸ್ವಸ್ಥ ಶರೀರ ಹಾಗು ಜೀವನಕ್ಕಾಗಿ ದೋಷ
ಇದೇನು ವಿಚಿತ್ರವಾದ ಮಾತು ಆಂತಿದಾರೆ ಇವರು ಆಂತ ಯೋಚಿಸುತ್ತಿದಿರಾ? ವಿಚಿತ್ರ ಅಲ್ಲ, ಆಯುರ್ವೇದವನ್ನೇ ಹೇಳುತ್ತಿದ್ದೇನೆ.
ಪಂಚಮಹಾಭೂತಗಳಿಂದಲೇಈ ದೋಷಗಳ ಉದ್ಭವ. ವಾತದೋಷ: ವಾಯು + ಆಕಾಶ. ಪಿತ್ತದೋಷ: ಅಗ್ನಿ.
ಕಫದೋಷ: ಜಲ + ಪೃಥ್ವಿ. ಈ ದೋಷಗಳು ಕ್ರಿಯಾತ್ಮಕವಾದ ಅಂಶಗಳು. ನಮ್ಮ ವೆಕ್ತಿತ್ವ, ಆರೋಗ್ಯ ಪಾಲನೆ, ದೈನಂದಿನ ಕ್ರಿಯೆಗಳು ಮತ್ತು ಅನಾರೋಗ್ಯ ಇವೆಲ್ಲವೂ ಪ್ರಮುಖವಾಗಿ ದೋಷಗಳನ್ನೇ ಅವಲಂಬಿಸಿವೆ.
ದೋಷಗಳನ್ನು ದೂಷಣೆ ಸ್ವಭಾವದಿಂದಲೇ ಗುರುತಿಸುವುದರಿಂದ ದೋಷ ಎಂದು ಹೆಸರು. ದೋಷಗಳು ಪ್ರಾಕೃತಿಕ ಕೆಲಸಗಳನ್ನು ಮಾಡುವಾಗ ದೇಹಕ್ಕೆ ಆಧಾರ. ಆದರೂ, ದೂಷಣೆಯಾಗಲು ಅವುಗಳು ಅತ್ಯಗತ್ಯವಾದುದರಿಂದ ದೋಷವೆಂಬ ಪದ ಅತಿ ಸೂಕ್ತ. ಹಾಗು ಅವುಗಳ ಇರುವಿಕೆಯೂ ದೂಷಣೆಯುಂಟಾದಾಗಲೇ ಅರಿವಾಗುವುದು.ದೂಷಣೆಯೆಂದರೆ, ಸಹಜ ಆರೋಗ್ಯಕರ ಸ್ಥಿತಿಯ ಏರುಪೇರು. ಇದರಿಂದ ತಾತ್ಕಾಲಿಕವಾದ ಅಥವಾ ದೀರ್ಘಕಾಲೀನ ಖಾಯಿಲೆ ಉಂಟಾಗುತ್ತದೆ. ದೋಷಗಳು ಆಯುರ್ವೇದ ಚಿಕಿತ್ಸೆ, ಸಲಹೆಗಳಿಗೆ ಮೂಲಾಧಾರ. ಅವುಗಳನ್ನು ಅತಿಸೂಕ್ಷ್ಮವಾಗಿ ಅರ್ಥಮಾಡಿಕೊಂಡೆ ಆಯುರ್ವೇದ ಚಿಕಿತ್ಸೆ ಮಾಡಲಾಗುವುದು.
ವಾತದೋಷ
ವಾತವೆಂಬುದು ಚಲನೆಯ ದ್ಯೋತಕ. ಇದನ್ನು ’ವಿಭು’ ಎನ್ನಲಾಗಿದೆ. ಅಂದರೆ ವಾತವು ಎಲ್ಲೆಡೆಯಲ್ಲೂ ಇದ್ದು, ಎಲ್ಲದರ ನಿಯಂತ್ರಕವೂ ಕೂಡ.
ವಾತ ದ್ರವ್ಯರೂಪಕ್ಕಿಂತಲೂ ಕಾರ್ಯರೂಪದಲ್ಲಿ ಹೆಚ್ಚಾಗಿ ಇರುವುದರಿಂದ ಅದನ್ನ ಅರ್ಥಮಾಡಿಕೊಳ್ಳಲು ಸ್ವಲ್ಪ ಕಲ್ಪನಾ ಶಕ್ತಿ ಬೇಕಾಗುತ್ತದೆ.
ವಾತದ ಗುಣಗಳು ಒಣ ಸ್ವಭಾವ, ಹಗುರ,ತಂಪು, ಒರಟು, ಸೂಕ್ಷ್ಮ ಮತ್ತು ಚಲತ್ವ.
ವಾತವು ಪ್ರಮುಖವಾಗಿ ನಾಭಿಯ ಕೆಳಭಾಗದಲ್ಲಿ ಹೊಂದಿರುತ್ತದೆ. ಅಲ್ಲದೆ, ಪ್ರಮುಖವಾಗಿ ದೊಡ್ಡಕರುಳು, ಸೂಂಟ ಪ್ರದೇಶ, ತೊಡೆ, ಕಿವಿ, ಮೂಳೆಗಳು ಮತ್ತು ಚರ್ಮದಲ್ಲಿ ಇರುತ್ತದೆ. ವಾತವು ಪ್ರಾಣ, ಉದಾನ, ವ್ಯಾನ, ಸಮಾನ ಮತ್ತು ಅಪಾನ ವಾತಗಳೆಂದು ೫ ವಿಧದಲ್ಲಿ ಕಾರ್ಯನಿರ್ವಹಿಸುತ್ತದೆ. ವಾತದ ಪ್ರಮುಖ ಕಾರ್ಯಗಳು ಉಸಿರಾಟ ನಿಯಂತ್ರಣ, ಜೀರ್ಣಾಂಗ ಚಲನೆ, ಇಂದ್ರೀಯಗಳ ನಿಯಂತ್ರಣ, ಮಲ ವಿಸರ್ಜನೆ, ಶಿಶುಜನನಕ್ರಿಯೆ, ಅಂಗವ್ಯೂಹಗಳ ಸಂಯೋಜನೆ ಇತ್ಯಾದಿ. ವಾತವು ಹೆಚ್ಚಾದರೆ ದೌರ್ಬಲ್ಯ, ಅಂಗಾಂಗಗಳ ಒಣಗುವಿಕೆ, ವಿವಿಧ ಅಂಗಾಂಗಗಳ ನೋವು,ಶರೀರದ ಕೃಶತ್ವ, ಮೈಬಣ್ಣ ಕಪ್ಪಾಗುವಿಕೆ, ಉಷ್ಣದ ಬಯಕೆ, ಮಲಬದ್ಧತೆ, ನಿದ್ರಾಹೀನತೆ, ಅಸಂಭದ್ಧ ಮಾತುಗಳು ಇತ್ಯಾದಿಗಳು ಕಂಡುಬರುತ್ತವೆ. ವಾತವು ಕಡಿಮೆಯಾದರೆ ಮಾತು ಕಡಿಮೆಯಾಗುವಿಕೆ, ಸಂಜ್ಞಾಗ್ರಹಿಕೆಯ ಕಡಿಮೆಯಾಗುವಿಕೆ ಇತ್ಯಾದಿಗಳು ಕಂಡುಬರುತ್ತದೆ.
ಪಿತ್ತದೋಷ
ದೇಹದಲ್ಲಿ ಶಾಖ, ಪರಿವರ್ತನೆಗಳು ಮುಂತಾದ ಚಯಾಪಚಯ, ದೃಷ್ಟಿಗೆ, ರಕ್ತದ ರಕ್ತ ಬಣ್ಣಕ್ಕೆ, ಬುದ್ಧಿಶಕ್ತಿಗೆ, ಜೀರ್ಣಕ್ರಿಯೆಗೆ ಹೀಗೆ ಅನೇಕ ಕ್ರಿಯೆಗಳಿಗೆಲ್ಲ ಪಿತ್ತವೇ ಕಾರಣ.
ಪಿತ್ತದ ಸಾಮಾನ್ಯ ಗುಣಗಳೆಂದರೆ ಸ್ನಿಗ್ಧತೆ, ತೀಕ್ಷ್ಣತೆ, ಉಷ್ಣತೆ, ಲಘುತ್ವ, ದ್ರವತ್ವ, ಚಲಿಸುವಿಕೆ, ಉಗ್ರಗಂಧ ಇತ್ಯಾದಿ.
ಪಿತ್ತವು ನಾಭಿಯ ಸುತ್ತಲು, ಚರ್ಮ, ಕಣ್ಣು, ಹೃದಯ, ಪಿತ್ತಜನಕಾಂಗ ಮುಂತಾದ ಕಡೆಗಳಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತದೆ.
ಪಾಚಕ, ರಂಜಕ, ಭ್ರಾಜಕ, ಸಾಧಕ ಮತ್ತು ಆಲೋಚಕ ಪಿತ್ತಗಳಾಗಿ ಕಾರ್ಯನಿರ್ವಹಿಸುತ್ತದೆ. ಜೀರ್ಣಕ್ರಿಯೆ, ರಕ್ತೂತ್ಪತ್ತಿ,ಚರ್ಮಕ್ಕೆ ಹಚ್ಚಿದ ದ್ರವ್ಯಗಳ ಪಾಚನ,ಮೈಬಣ್ಣ ದೇಹದ ಉಷ್ಣತೆಯ ನಿಯಂತ್ರಣ, ಯೋಚನಾ ಸಾಮರ್ಥ್ಯ, ಧೈರ್ಯ, ರೂಪಗ್ರಹಣ ಮುಂತಾದ ಕಾರ್ಯಗಳನ್ನು ನಿರ್ವಹಿಸುತ್ತದೆ.
ಪಿತ್ತವು ಅತಿಯಾದರೆ ದೇಹದ ತಾಪ ಏರಿಕೆ, ಅಂಗಾಂಗಗಳು ಹಳದಿ ಬಣ್ಣಕ್ಕೆ ತಿರುವಿಕೆ, ಅತಿಸಾರ, ಅಧಿಕ ಹಸಿವು, ಅಧಿಕ ಬಾಯಾರಿಕೆ, ಉರಿ, ನಿದ್ರಾಹಾನಿ ಇತ್ಯಾದಿ. ಹಾಗೆಯೇ ಅಲ್ಪತೆಯಾದರೆ ದೇಹದ ಶೀತತೆ, ಹಸಿವಿಲ್ಲದಿರುವಿಕೆ ಇತ್ಯಾದಿ.
ಕಫ ದೋಷ
ಬಂಧನ, ಬಲ, ಇತ್ಯಾದಿಗಳಿಗೆ ಕಫವೇ ಕಾರಣ.
ಕಫದ ಸಾಮಾನ್ಯ ಗುಣಗಳೆಂದರೆ ಸ್ನಿಗ್ಧತೆ, ಅಂಟುವಿಕೆ, ಭಾರ, ಮಂದತೆ, ಶೀತತೆ ಇತ್ಯಾದಿ.
ಇದು ಮುಖ್ಯವಾಗಿ ಎದೆಯ ಭಾಗದಲ್ಲಿ, ಸಂದಿಗಳು, ಜಠರ, ನಾಲಿಗೆ, ಶಿರಸ್ಸು ಇತ್ಯಾದಿ ಪ್ರಮುಖ ಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತದೆ.
ಕಫವನ್ನು ತರ್ಪಕ, ಅವಲಂಬಕ, ಬೋಧಕ, ಕ್ಲೇದಕ ಮತ್ತು ಶ್ಲೇಷಕ ಕಫವೆಂದು ವಿಂಗಡಿಸುತ್ತಾರೆ. ತರ್ಪಕವು ಮೆದುಳನ್ನು ರಕ್ಷಿಸಿ ಇಂದ್ರೀಯ ಪೋಷಣಿ, ಅವಲಂಬಕವು ಹೃದಯವನ್ನು ರಕ್ಷಿಸುತ್ತದೆ, ಬೋಧಕವು ರುಚಿಯನ್ನು ಗ್ರಹಿಸುತ್ತದೆ, ಕ್ಲೇದಕವು ಆಹಾರ ಪಚನಕ್ಕೆ ಸಹಾಯ ಮಾಡುತ್ತದೆ ಮತ್ತು ಶ್ಲೇಷಕವು ನಮ್ಮ ಸಂದಿಗಳಲ್ಲಿ ದ್ರವದಂತೆ ಇದ್ದು ಚಲನೆಗೆ ಸಹಾಯ ಮಾಡುತ್ತದೆ.
ಕಫವು ಅತಿಯಾದಾಗ ಜಡತ್ವ, ಹಸಿವು ಕಡಿಮೆಯಾಗುವುದು,ಅತಿನಿದ್ರೆ, ಆಯಾಸ, ದೇಹದಲ್ಲಿ ಕೊಬ್ಬಿನ ಶೇಖರಣೆ, ಮೈ ಬಿಳಿಚಿಕೊಳ್ಳುವುದು, ವಾಂತಿ ಇತ್ಯಾದಿ. ಹಾಗೆಯೇ ಕಡಿಮೆಯಾದರೆ ವಾತವು ಜಾಸ್ತಿಯಾದ ಲಕ್ಷಣಗಳು ಕಂಡುಬರುತ್ತವೆ.
ಧಾತು
ಶರೀರ ಧಾರಣಿ ಮತ್ತು ಪೋಷಣಿ ಸಾಮರ್ಥ್ಯವಿರುವುದನ್ನು ಧಾತು ಎನ್ನುತ್ತಾರೆ. ಕ್ರಮವಾಗಿ ರಸಧಾತು, ರಕ್ತಧಾತು, ಮಾಂಸಧಾತು, ಮೇದಧಾತು, ಅಸ್ಥಿಧಾತು, ಮಜ್ಜಾಧಾತು ಹಾಗೂ ಶುಕ್ರಧಾತು.
ರಸಧಾತು: ಶರೀರದಲ್ಲಿರುವ ದ್ರವಸ್ವರೂಪ ಧಾತು, ಪೋಷಣೆಯ ಕೆಲಸ ಮಾಡುತ್ತದೆ. ರಕ್ತಧಾತು: ರಕ್ತವರ್ಣವಿರುವ ದ್ರವ ಧಾತು.
ಮಾಂಸಧಾತು: ಶರೀರವನ್ನು ತುಂಬಿಸುವ ಮಾಂಸಪೇಶಿಗಳು ಇತ್ಯಾದಿ. ಮೇದೋಧಾತು: ಕೊಬ್ಬಿನಂಶ ಅದು ಸ್ನಿಗ್ಧತೆಯನ್ನು ನೀಡುತ್ತದೆ.
ಅಸ್ಥಿಧಾತು: ಆಧಾರ ಕೊಡುವ ಮೂಳೆ ಇತ್ಯಾದಿ. ಮಜ್ಜಾಧಾತು: ಮೂಳೆಗಳನ್ನು ತುಂಬಿಸಿ ದೇಹಕ್ಕೆ ಬಲ ನೀಡುತ್ತದೆ. ಶುಕ್ರಧಾತು: ಪ್ರಜನನಕ್ಕೆ ಅಗತ್ಯವಾದ ವೀರ್ಯ, ಸ್ರಾವಗಳು ಇತ್ಯಾದಿ.
ಧಾತುಗಳಿಗೆ ಅದರದ್ದೇ ಆದ ಸ್ಥಾನ, ಕಾರ್ಯವಿರುತ್ತದೆ. ಅವುಗಳಲ್ಲಿ ಏರುಪೇರಾದರೆ ಖಾಯಿಲೆಗಳು ಬರುತ್ತವೆ. ದೋಷಗಳು ಧಾತುಗಳಲ್ಲಿ ಸೇರಿ ವಿವಿಧ ರೋಗಗಳನ್ನು ಉಂಟುಮಾಡಬಲ್ಲವು.
ಧಾತುಗಳ ಸಾರ “ಓಜಸ್ಸು” . ಇದುವೇ ವ್ಯಕ್ತಿಯ ಆರೋಗ್ಯ, ಮತ್ತು ಸಾವಿಗೆ ಕಾರಣ. ಉತ್ತಮ ಓಜಸ್ಸೆಂದರೆ ಉತ್ತಮ ಆರೋಗ್ಯ.
ಮಲ
ಶರೀರವನ್ನು ಮಲಿನಗೊಳಿಸುವುದರಿಂದ ’ಮಲ’. ಮಲಗಳು ಪ್ರಮುಖವಾಗಿ ೩ ವಿಧ. ಅವು ಪುರೀಷ,ಮೂತ್ರ ಮತ್ತು ಬೆವರು ಎಂದಾಗಿವೆ.
ಅವುಗಳಿಲ್ಲದೆಯೂ ಆರೋಗ್ಯ ಮತ್ತು ಆಯಸ್ಸು ದೊರೆಯುವುದಿಲ್ಲ. ಮಲಗಳು ಹೆಚ್ಚು ಅಥವಾ ಕಡಿಮೆಯಾದಾಗ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಹಾಗೂ ಅವುಗಳ ಸಮಸ್ಥಿತಿಯು ಆರೋಗ್ಯವನ್ನು ಕಾಪಾಡುತ್ತದೆ.
ನಮ್ಮ ದೇಹದಲ್ಲಿ ದೋಷಗಳು ಕಾರ್ಯರೂಪ ಅಂಶಗಳು, ಧಾತುಗಳು ಆಧಾರಸ್ತಂಭ, ಬೇರೆ ಬೇರೆ ರೀತಿಯ ಕ್ರೀಯೆಯಿಂದಾಗುವ ಮಲಗಳ ಕಾಲಕ್ಕೆ ತಕ್ಕಂತೆ ಶರೀರದಿಂದ ನಿರ್ಗಮನ. ಈ ರೀತಿ ೩ ಧೋಷ, ೭ ಧಾತು, ೭ ಮಲಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಾ ಸುಧೀರ್ಘ ಜೀವನಕ್ಕೆ ಅಡಿಪಾಯವಾಗಿರುತ್ತದೆ.
ಡಾll ನಾಗರಾಜ್.ಕಾಮತ್
ಎಂ.ಡಿ (ಆಯು)
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಹಾಸನ