Ad
GREEN VALLEY INTERNATIONAL SCHOOL
ರಾಜ್ಯ

ಅಂಜುಮನ್ ಪಾರದರ್ಶಕ ಆಡಳಿತ, ಸಂಸ್ಥೆಯ ಅಭಿವೃದ್ಧಿಯೇ ಗುರಿ ಅಭ್ಯರ್ಥಿ ಬಂದೇನವಾಜ ಕುಮಸಿ

ಸಂಸ್ಥೆಯ ಶೈಕ್ಷಣಿಕ, ಧಾರ್ಮಿಕ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಸದಸ್ಯರ ಸಹಕಾರದೊಂದಿಗೆ ಅಂಜುಮನ್ ಸಂಸ್ಥೆಯನ್ನು ಇನ್ನಷ್ಟು ಬಲಿಷ್ಠ ಹಾಗೂ ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಸಂಕಲ್ಪ ಹೊಂದಿರುವುದಾಗಿ ಅವರು ತಿಳಿಸಿದರು.

ನಮಸ್ತೆ ಕರ್ನಾಟಕ ಡೆಸ್ಕ್
28/7/2026 · 32 views
ಅಂಜುಮನ್ ಪಾರದರ್ಶಕ ಆಡಳಿತ, ಸಂಸ್ಥೆಯ ಅಭಿವೃದ್ಧಿಯೇ ಗುರಿ ಅಭ್ಯರ್ಥಿ ಬಂದೇನವಾಜ ಕುಮಸಿ ಮುದ್ದೇಬಿಹಾಳ - ಜುಲೈ 28: ಪಟ್ಟಣದ ಅಂಜುಮನ್-ಇ-ಇಸ್ಲಾಂ ಕಮೀಟಿಯ ಆಡಳಿತ ಮಂಡಳಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಂಗಳವಾರ ನಡೆದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿ ಬಂದೇನವಾಜ ಕುಮಸಿ ಅವರು ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಅಂಜುಮನ್-ಇ-ಇಸ್ಲಾಂ ಕಚೇರಿಗೆ ಆಗಮಿಸಿ ಅಧಿಕೃತವಾಗಿ ತಮ್ಮ ನಾಮಪತ್ರ ಸಲ್ಲಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ತಬಸುಮ್ ಮಹಿಷವಾಡಗಿ ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಿತು. ಈ ವೇಳೆ ಬೆಂಬಲಿಗರು ಘೋಷಣೆಗಳನ್ನು ಕೂಗಿ ಅಭ್ಯರ್ಥಿಗೆ ಶುಭಾಶಯ ಕೋರಿದರು ಹಾಗೂ ಚುನಾವಣೆಯಲ್ಲಿ ಈ ಬಾರಿ ಅವರು ಜಯಗಳಿಸುವ ವಿಶ್ವಾಸ ವ್ಯಕ್ತಪಡಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಭ್ಯರ್ಥಿ ಬಂದೇನವಾಜ ಕುಮಸಿ, "ಅಂಜುಮನ್-ಇ-ಇಸ್ಲಾಂ ಸಂಸ್ಥೆಯ ಅಭಿವೃದ್ಧಿ, ಸಂರಕ್ಷಣೆ ಹಾಗೂ ಪಾರದರ್ಶಕ ಆಡಳಿತಕ್ಕಾಗಿ ಹಲವು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿದ್ದೇನೆ. ಸಂಸ್ಥೆಯ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಬೆಳವಣಿಗೆಯ ವಿರುದ್ಧ ಧ್ವನಿ ಎತ್ತಿದ್ದೇನೆ. ಕಳೆದ ಚುನಾವಣೆಯಲ್ಲಿ ಕೇವಲ 20 ಮತಗಳ ಅಂತರದಿಂದ ಸೋಲು ಕಂಡಿದ್ದರೂ ಸದಸ್ಯರ ಪ್ರೀತಿ ಮತ್ತು ವಿಶ್ವಾಸ ನನ್ನ ಮೇಲಿದ್ದು, ಈ ಬಾರಿ ಮತದಾರರು ನನ್ನ ಸೇವೆಯನ್ನು ಪರಿಗಣಿಸಿ ಆಶೀರ್ವದಿಸಲಿದ್ದಾರೆ ಎಂಬ ದೃಢ ನಂಬಿಕೆ ಇದೆ," ಎಂದು ಹೇಳಿದರು. ಸಂಸ್ಥೆಯ ಶೈಕ್ಷಣಿಕ, ಧಾರ್ಮಿಕ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಸದಸ್ಯರ ಸಹಕಾರದೊಂದಿಗೆ ಅಂಜುಮನ್ ಸಂಸ್ಥೆಯನ್ನು ಇನ್ನಷ್ಟು ಬಲಿಷ್ಠ ಹಾಗೂ ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಸಂಕಲ್ಪ ಹೊಂದಿರುವುದಾಗಿ ಅವರು ತಿಳಿಸಿದರು. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾಜಿ ಅಂಜುಮನ್ ಸದಸ್ಯ ಅಬ್ದುಲ್ ಮಜೀದ್ ಮಕಾನದಾರ್ ಯುನಾಯಕ ಮೋಮಿನ್, ಹಸನ್ ಬಗವಾನ್ ಸೇರಿದಂತೆ ಹಲವು ಮುಖಂಡರು, ಹಿರಿಯರು, ಯುವಕರು ಹಾಗೂ ಅಪಾರ ಸಂಖ್ಯೆಯ ಬೆಂಬಲಿಗರು ಉಪಸ್ಥಿತರಿದ್ದು, ಅಭ್ಯರ್ಥಿಗೆ ಶುಭ ಹಾರೈಸಿದರು. ಅಂಜುಮನ್ -ಇ- ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆಗೆ ವಿವಿಧ ಅಭ್ಯರ್ಥಿಗಳು ಕಣಕ್ಕಿಳಿದಿರುವ ಹಿನ್ನೆಲೆಯಲ್ಲಿ ಸದಸ್ಯರ ಸಂಪರ್ಕ, ಪ್ರಚಾರ ಹಾಗೂ ಮತಯಾಚನೆ ಚಟುವಟಿಕೆಗಳು ಚುರುಕುಗೊಂಡಿವೆ. ಈ ಬಾರಿಯ ಚುನಾವಣೆಯು ಸದಸ್ಯರ ನಡುವೆ ತೀವ್ರ ಕುತೂಹಲ ಮೂಡಿಸಿದ್ದು, ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.
Ad
ಸಂಪಾದಕರು

ಕಾಮೆಂಟ್‌ಗಳು (0)

ಕಾಮೆಂಟ್ ಮಾಡಲು ಲಾಗಿನ್ ಮಾಡಿ.

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ!