ಬ್ರೇಕಿಂಗ್
Ad
SAI CAR CARE
ರಾಜ್ಯ

ಬರದ ಬೇಂಕಿಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಹಾಲಿ–ಮಾಜಿ ಶಾಸಕರು: ಮಹೇಬೂಬ ಹಡಲಗೇರಿ

“ರೈತರ ಕಣ್ಣೀರಿಗೆ ರಾಜಕೀಯ ಬಣ್ಣ ಬೇಡ; ಬರ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನವಾಗಲಿ: ಮಹೇಬೂಬ ಹಡಲಗೇರಿ” ಮುದ್ದೇಬಿಹಾಳ ಕ್ಷೇತ್ರದಲ್ಲಿ ತೀವ್ರ ಬರ ಪರಿಸ್ಥಿತಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಹಲವು ಬಾರಿ ಬಿತ್ತನೆ ಮಾಡಿ ಬೀಜ, ಗೊಬ್ಬರ ಹಾಗೂ ಕೃಷಿ ವೆಚ್ಚ ಭರಿಸಿದರೂ ಬೆಳೆ ನಷ್ಟ ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ರೈತರ ಸಮಸ್ಯೆಯನ್ನು ಪರಿಹರಿಸುವ ಬದಲು ಹಾಲಿ ಮತ್ತು ಮಾಜಿ ಶಾಸಕರು ರಾಜಕೀಯ ಆರೋಪ–ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಮುದ್ದೇಬಿಹಾಳ ಮತಕ್ಷೇತ್ರದ ಅಧ್ಯಕ್ಷ ಮಹೇಬೂಬ ಹಡಲಗೇರಿ ಟೀಕಿಸಿದ್ದಾರೆ. ಮುದ್ದೇಬಿಹಾಳವನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಲು ಆಡಳಿತ ಪಕ್ಷದ ಹಾಲಿ ಶಾಸಕರು ಸರ್ಕಾರದ ಮೇಲೆ ಪರಿಣಾಮಕಾರಿ ಒತ್ತಡ ತರಬೇಕು. ರೈತರ ಬೆಳೆ ನಷ್ಟ, ಬೆಳೆ ವಿಮೆ ಹಾಗೂ ಪರಿಹಾರದ ಕುರಿತು ಸರ್ಕಾರ ಸ್ಪಷ್ಟ ವರದಿ ನೀಡಬೇಕು. ರೈತರ ಸಂಕಷ್ಟವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳದೆ, ಅವರಿಗೆ ನ್ಯಾಯ ಮತ್ತು ಪರಿಹಾರ ದೊರಕಿಸಲು ನಾವೆಲ್ಲರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಹಡಲಗೇರಿ ಒತ್ತಾಯಿಸಿದ್ದಾರೆ.

ನ
ನಮಸ್ತೆ ಕರ್ನಾಟಕ ಡೆಸ್ಕ್
12/9/2026 · 410 views
Ad
ನಮಸ್ತೆ ಕರ್ನಾಟಕ
ಮುದ್ದೇಬಿಹಾಳ, ಸೆ.12:ಮುದ್ದೇಬಿಹಾಳ ಮತಕ್ಷೇತ್ರದ ರೈತರು ತೀವ್ರ ಬರ ಪರಿಸ್ಥಿತಿಯಿಂದ ಸಂಕಷ್ಟ ಅನುಭವಿಸುತ್ತಿದ್ದು, ರೈತರ ಬದುಕು ಬರದ ಬೇಗೆಯಲ್ಲಿ ಬೆಂದು ಬೂದಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಇದೇ ಸಂದರ್ಭದಲ್ಲಿ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರು ರೈತರ ಸಮಸ್ಯೆಯನ್ನು ರಾಜಕೀಯವಾಗಿ ಬಳಸಿಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಮುದ್ದೇಬಿಹಾಳ ಮತಕ್ಷೇತ್ರದ ಅಧ್ಯಕ್ಷ ಮಹೇಬೂಬ ಹಡಲಗೇರಿ ಟೀಕಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, “ಕ್ಷೇತ್ರದ ರೈತರು ಸಂಕಷ್ಟದಲ್ಲಿರುವಾಗ ಅವರ ನೋವಿಗೆ ಸ್ಪಂದಿಸುವ ಬದಲು ಹಾಲಿ–ಮಾಜಿ ಶಾಸಕರು ಪರಸ್ಪರ ಆರೋಪ–ಪ್ರತ್ಯಾರೋಪಗಳಲ್ಲಿ ತೊಡಗಿರುವುದು ದುರದೃಷ್ಟಕರ. ರೈತರು ನಿಮ್ಮ ರಾಜಕೀಯ ನಾಟಕವನ್ನು ನೋಡುತ್ತಿದ್ದಾರೆ ಮತ್ತು ಎಲ್ಲವನ್ನೂ ಗಮನಿಸುತ್ತಿದ್ದಾರೆ” ಎಂದು ಹೇಳಿದರು. ಮಾಜಿ ಶಾಸಕರು ಸುಮಾರು ಮೂರು ವರ್ಷಗಳ ಕಾಲ ಮೌನವಾಗಿದ್ದು, ಇದೀಗ ಬರದ ವಿಚಾರದಲ್ಲಿ ಧ್ವನಿ ಎತ್ತುತ್ತಿರುವುದೇಕೆ ಎಂಬ ಪ್ರಶ್ನೆ ಕ್ಷೇತ್ರದ ಜನರಲ್ಲಿ ಮೂಡಿದೆ. ಕಳೆದ ಮೂರು ವರ್ಷಗಳಲ್ಲಿ ಕ್ಷೇತ್ರದಲ್ಲಿ ಏನೆಲ್ಲಾ ಅಭಿವೃದ್ಧಿ ಕಾರ್ಯಗಳು ನಡೆದಿವೆ, ರೈತರಿಗಾಗಿ ಯಾವ ರೀತಿಯ ಪ್ರಯತ್ನಗಳನ್ನು ಮಾಡಲಾಗಿದೆ ಎಂಬುದರ ಬಗ್ಗೆ ಜನರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಅವರು ಒತ್ತಾಯಿಸಿದರು. ಅದೇ ರೀತಿ, ಹಾಲಿ ಶಾಸಕರು ಕಳೆದ ಮೂರು ವರ್ಷಗಳಲ್ಲಿ ಕ್ಷೇತ್ರದ ಜನರಿಗೆ ನೀಡಿದ ಭರವಸೆಗಳಲ್ಲಿ ಎಷ್ಟನ್ನು ಈಡೇರಿಸಿದ್ದಾರೆ ಎಂಬುದನ್ನು ಬಹಿರಂಗವಾಗಿ ಜನರ ಮುಂದೆ ಹೇಳಬೇಕು. ಚುನಾವಣೆ ಸಮೀಪಿಸುತ್ತಿದ್ದಂತೆ ಮಾತ್ರ ರೈತರ ಸಮಸ್ಯೆಗಳು ಹಾಗೂ ಅಭಿವೃದ್ಧಿ ವಿಚಾರಗಳು ರಾಜಕೀಯ ವೇದಿಕೆಯಲ್ಲಿ ಚರ್ಚೆಯಾಗುವುದು ಸರಿಯಲ್ಲ ಎಂದು ಮಹೇಬೂಬ ಹಡಲಗೇರಿ ಹೇಳಿದರು. ಮೂರು ಬಾರಿ ಬಿತ್ತನೆ; ರೈತರ ಸಂಕಷ್ಟಕ್ಕೆ ಕೊನೆಯೇ ಇಲ್ಲ ಮುದ್ದೇಬಿಹಾಳ ಕ್ಷೇತ್ರದ ಅನೇಕ ರೈತರು ಮಳೆಯ ನಿರೀಕ್ಷೆಯಲ್ಲಿ ಮೂರು ಬಾರಿ ಬಿತ್ತನೆ ಮಾಡಿದ್ದು, ಬೀಜ, ಗೊಬ್ಬರ, ಉಳುಮೆ ಸೇರಿದಂತೆ ಪ್ರತಿಯೊಂದು ಹಂತದಲ್ಲೂ ಹಣ ಖರ್ಚು ಮಾಡಿದ್ದಾರೆ. ಬೆಳೆ ವಿಮೆಗಾಗಿ ಪ್ರೀಮಿಯಂ ಪಾವತಿಸಿದ್ದರೂ, ರೈತರ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ನಿಖರವಾದ ವರದಿ ಹಾಗೂ ಪರಿಹಾರದ ಕುರಿತು ಸ್ಪಷ್ಟತೆ ಇನ್ನೂ ದೊರೆಯುತ್ತಿಲ್ಲ. ಇದರಿಂದ ರೈತರಲ್ಲಿ ಹಲವು ಪ್ರಶ್ನೆಗಳು ಮೂಡಿವೆ ಎಂದು ಅವರು ಹೇಳಿದರು. “ಬರದ ಬರೆ ಕೇವಲ ರೈತರ ಮೇಲಷ್ಟೇ ಬಿದ್ದಿಲ್ಲ. ರೈತರ ಉತ್ಪನ್ನಗಳನ್ನು ಅವಲಂಬಿಸಿರುವ ವ್ಯಾಪಾರಿಗಳು, ಕಾರ್ಮಿಕರು ಮತ್ತು ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಮೇಲೂ ಇದರ ಪರಿಣಾಮ ಬಿದ್ದಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳು ರಾಜಕೀಯಕ್ಕಿಂತ ರೈತರ ಹಿತಕ್ಕೆ ಆದ್ಯತೆ ನೀಡಬೇಕು” ಎಂದು ಅವರು ತಿಳಿಸಿದರು. ಆಡಳಿತ ಪಕ್ಷದಲ್ಲಿದ್ದರೂ ಬರ ಘೋಷಣೆಗೆ ಏಕೆ ವಿಳಂಬ? ಮುದ್ದೇಬಿಹಾಳ ಕ್ಷೇತ್ರವನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಲು ಆಡಳಿತ ಪಕ್ಷದ ಪ್ರತಿನಿಧಿಯಾಗಿರುವ ಹಾಲಿ ಶಾಸಕರಿಗೆ ಸರ್ಕಾರದ ಮಟ್ಟದಲ್ಲಿ ಒತ್ತಡ ತರಲು ಸಾಧ್ಯವಾಗುತ್ತಿಲ್ಲವೇ ಎಂಬ ಪ್ರಶ್ನೆಯನ್ನು ಮಹೇಬೂಬ ಹಡಲಗೇರಿ ಎತ್ತಿದರು. “ನಾನು ಯಾರ ದಮ್ಮು–ತಾಕತ್ತಿನ ಬಗ್ಗೆ ಮಾತನಾಡುವುದಿಲ್ಲ. ಆದರೆ ನಮ್ಮ ಕ್ಷೇತ್ರದ ರೈತರಿಗೆ ಆಗುತ್ತಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದೆ. ಅವರು ಅಸಮರ್ಥರಾಗಿದ್ದಾರೆಯೇ ಅಥವಾ ಅಶಕ್ತರಾಗಿದ್ದಾರೆಯೇ ಎಂಬುದನ್ನು ಜನರೇ ನಿರ್ಧರಿಸಲಿ. ಆದರೆ ರೈತರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು” ಎಂದು ಅವರು ಹೇಳಿದರು. ಎರಡನೇ ಪಟ್ಟಿಯ ನಿರೀಕ್ಷೆ: ಸತ್ಯಾಸತ್ಯತೆ ಕಾದು ನೋಡೋಣ ಮುದ್ದೇಬಿಹಾಳ ಮತಕ್ಷೇತ್ರವನ್ನು ಎರಡನೇ ಪಟ್ಟಿಯಲ್ಲಿ ಬರಪೀಡಿತ ತಾಲ್ಲೂಕು ಎಂದು ಘೋಷಿಸುವ ಭರವಸೆ ಇದೆ ಎಂದು ಹಾಲಿ ಶಾಸಕರು ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ. ಈ ಹೇಳಿಕೆ ಎಷ್ಟರ ಮಟ್ಟಿಗೆ ಸತ್ಯವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಮಹೇಬೂಬ ಹಡಲಗೇರಿ ಹೇಳಿದರು. ರೈತರ ಸಂಕಷ್ಟವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳದೆ, ನಾವೆಲ್ಲರು ಒಗ್ಗಟ್ಟಾಗಿ ಸರ್ಕಾರದ ಮೇಲೆ ಒತ್ತಡ ತಂದು ಮುದ್ದೇಬಿಹಾಳ ಕ್ಷೇತ್ರಕ್ಕೆ ಬರಪೀಡಿತ ತಾಲ್ಲೂಕಿನ ಸ್ಥಾನಮಾನ ಹಾಗೂ ರೈತರಿಗೆ ಅಗತ್ಯ ಪರಿಹಾರ ದೊರಕಿಸಿಕೊಡಬೇಕು. ಬರದ ಬೇಂಕಿಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಬದಲು ರೈತರ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು ಅವರು ಎಚ್ಚರಿಸಿದರು.
Ad
ನಮಸ್ತೆ ಕರ್ನಾಟಕ

ಕಾಮೆಂಟ್‌ಗಳು (0)

ಕಾಮೆಂಟ್ ಮಾಡಲು ಲಾಗಿನ್ ಮಾಡಿ.

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ!