Ad
SAI CAR CARE
ರಾಜ್ಯ

SIR ವಿವಾದಕ್ಕೆ ಸರ್ಕಾರದ ಕಾನೂನು ಅಸ್ತ್ರ: ಶಿಕ್ಷಕರಿಗೆ ಮುಕ್ತಿ ನೀಡಲು ಮುಂದಾದ ಸಚಿವ ಮಧು ಬಂಗಾರಪ್ಪ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಸೇರಿದಂತೆ ವಿವಿಧ ಸರ್ವೆ ಕಾರ್ಯಗಳಿಗೆ ಶಿಕ್ಷಕರನ್ನು ನಿಯೋಜಿಸುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಹೊಸ ವಿಧೇಯಕ ಜಾರಿಗೆ ತಯಾರಿ ನಡೆಸಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಈ ಕುರಿತು ಸಂಪುಟದಲ್ಲಿ ಚರ್ಚಿಸಿ ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ವಿಧೇಯಕ ಮಂಡಿಸಿ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದ್ದಾರೆ.

ವ
ವರದಿ: ಅಬ್ದುಲ್ ಡೋಣುರ
5 ನಿಮಿಷಗಳ ಹಿಂದೆ · 3 views
Ad
https://cdn.phototourl.com/free/2026-08-28-22d04d2f-c690-46d3-8a0d-161e4b1f60b4.jpg
ಬೆಂಗಳೂರು, ಸೆ.26: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಸೇರಿದಂತೆ ವಿವಿಧ ಸರ್ವೆ ಕಾರ್ಯಗಳಿಗೆ ಶಿಕ್ಷಕರನ್ನು ನಿಯೋಜಿಸದಂತೆ ತಡೆಯಲು ರಾಜ್ಯ ಸರ್ಕಾರ ಹೊಸ ವಿಧೇಯಕ ಜಾರಿಗೆ ತಯಾರಿ ನಡೆಸಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಕರನ್ನು SIR ಪ್ರಕ್ರಿಯೆಯಿಂದ ಹೊರಗಿಡುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. “ಶಿಕ್ಷಕರಿಗೆ ಪಾಠ ಬೋಧನೆಯೇ ಪ್ರಮುಖ ಜವಾಬ್ದಾರಿ. ಶಿಕ್ಷಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳ ಉತ್ತಮ ಫಲಿತಾಂಶಕ್ಕೆ ಪರಿಣಾಮಕಾರಿ ಬೋಧನೆ ಪ್ರಮುಖ ಕಾರಣವಾಗಿದೆ. ಆದರೆ ಜಾತಿ ಗಣತಿ, ವಿವಿಧ ಸರ್ವೆಗಳು ಸೇರಿದಂತೆ ಹಲವು ಕೆಲಸಗಳಿಗೆ ಶಿಕ್ಷಕರನ್ನೇ ನಿಯೋಜಿಸುವ ವ್ಯವಸ್ಥೆ ನಿರ್ಮಾಣವಾಗಿದೆ. ಇದನ್ನು ಬದಲಾಯಿಸಬೇಕಿದೆ,” ಎಂದು ಸಚಿವರು ಹೇಳಿದರು. SIR ಕರ್ತವ್ಯದಿಂದ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಶಾಲಾ ಮಕ್ಕಳು ಹಾಗೂ ಪೋಷಕರಿಂದ ದೂರುಗಳು ಬರುತ್ತಿವೆ ಎಂದು ಅವರು ತಿಳಿಸಿದರು. ಕೆಲ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಮಧ್ಯಾಹ್ನದ ಊಟದ ಬಳಿಕ ಮಕ್ಕಳನ್ನು ಮನೆಗೆ ಕಳುಹಿಸಲಾಗುತ್ತಿದೆ ಎಂಬ ದೂರುಗಳೂ ಬಂದಿವೆ ಎಂದು ಹೇಳಿದರು. “ಇಂತಹ ಪರಿಸ್ಥಿತಿ ಮುಂದುವರಿಯಬಾರದು. ಶಿಕ್ಷಕರನ್ನು SIR ಕರ್ತವ್ಯದಿಂದ ಮುಕ್ತಗೊಳಿಸುವ ಕುರಿತು ಹಲವು ಬಾರಿ ಮನವಿ ಮಾಡಿದ್ದರೂ ಚುನಾವಣಾ ಆಯೋಗದಿಂದ ಸೂಕ್ತ ಸ್ಪಂದನೆ ದೊರೆತಿಲ್ಲ. ಹೀಗಾಗಿ ಸರ್ಕಾರವೇ ಕಾನೂನು ರೂಪಿಸುವ ನಿಟ್ಟಿನಲ್ಲಿ ಮುಂದಾಗಿದೆ,” ಎಂದು ಮಧು ಬಂಗಾರಪ್ಪ ತಿಳಿಸಿದರು. ಈ ಕುರಿತು ರಾಜ್ಯ ಸಚಿವ ಸಂಪುಟದಲ್ಲಿ ಚರ್ಚಿಸಿ, ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ವಿಧೇಯಕ ಮಂಡಿಸಿ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು. ಇದೇ ವೇಳೆ ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿರುವ ಶೂ ಮತ್ತು ಸಾಕ್ಸ್‌ಗಳ ಗುಣಮಟ್ಟ ಕಳಪೆಯಾಗಿದೆ ಎಂಬ ಆರೋಪವನ್ನು ಸಚಿವರು ತಳ್ಳಿಹಾಕಿದರು. ಆದರೆ ಕೆಲವೆಡೆ ಶೂ ಮತ್ತು ಸಾಕ್ಸ್‌ಗಳ ಅಳತೆಯಲ್ಲಿ ವ್ಯತ್ಯಾಸವಾಗಿರುವುದನ್ನು ಒಪ್ಪಿಕೊಂಡರು. — ನಮಸ್ತೆ ಕರ್ನಾಟಕ ವೆಬ್ ನ್ಯೂಸ್
Ad
ಸಂಪಾದಕರು

ಕಾಮೆಂಟ್‌ಗಳು (0)

ಕಾಮೆಂಟ್ ಮಾಡಲು ಲಾಗಿನ್ ಮಾಡಿ.

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ!