ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಶವಸಂಸ್ಕಾರ ನಿಲ್ಲಿಸಿ; ಸೂಕ್ತ ಸ್ಥಳ ಗುರುತಿಸುವಂತೆ ಮಹಾಂತೇಶ ನಗರ ನಿವಾಸಿಗಳ ಮನವಿ
ಮುದ್ದೇಬಿಹಾಳ ಪಟ್ಟಣದ ಮಹಾಂತೇಶ ನಗರದಲ್ಲಿ ಜನವಸತಿ ಹಾಗೂ ಶಾಲೆಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಡೆಯುತ್ತಿರುವ ಶವಸಂಸ್ಕಾರವನ್ನು ನಿಲ್ಲಿಸಿ, ಜನವಸತಿ, ಶಾಲೆಗಳು ಹಾಗೂ ವಸತಿ ನಿಲಯಗಳಿಂದ ದೂರವಿರುವ ಸೂಕ್ತ ಸ್ಥಳವನ್ನು ಗುರುತಿಸಿ ಅಂತ್ಯಕ್ರಿಯೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯ ನಿವಾಸಿಗಳು ಮನವಿ ಮಾಡಿದ್ದಾರೆ.
ನ
ನಮಸ್ತೆ ಕರ್ನಾಟಕ ಡೆಸ್ಕ್
15/9/2026 · 226 views

Ad

ಮುದ್ದೇಬಿಹಾಳ, 15 ಸೆಪ್ಟೆಂಬರ್ 2026:ಮುದ್ದೇಬಿಹಾಳ ಪಟ್ಟಣದ ಮಹಾಂತೇಶ ನಗರದಲ್ಲಿ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಡೆಯುತ್ತಿರುವ ಶವಸಂಸ್ಕಾರವನ್ನು ನಿಲ್ಲಿಸಿ, ಜನವಸತಿ ಪ್ರದೇಶಗಳಿಂದ ದೂರವಿರುವ ಸೂಕ್ತ ಸ್ಥಳವನ್ನು ಗುರುತಿಸಿ ಅಂತ್ಯಕ್ರಿಯೆ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಮಹಾಂತೇಶ ನಗರ ನಿವಾಸಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಮಹಾಂತೇಶ ನಗರದಲ್ಲಿ ಹಳೆ ತರಕಾರಿ ಮಾರುಕಟ್ಟೆಗೆ ತೆರಳುವ ರಸ್ತೆಯಿಂದ ಸುಮಾರು 200 ಮೀಟರ್ ಒಳಭಾಗದಲ್ಲಿ ಹಿಂದಿನಿಂದಲೂ ಶವಸಂಸ್ಕಾರ ನಡೆಸಲಾಗುತ್ತಿತ್ತು. ಸುಮಾರು 10–15 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮನೆಗಳು ಹಾಗೂ ಶಾಲೆಗಳು ಇರಲಿಲ್ಲ. ಆದರೆ ಇದೀಗ ನಗರ ಬೆಳವಣಿಗೆಯೊಂದಿಗೆ ಈ ಪ್ರದೇಶದಲ್ಲಿ ಸಾಕಷ್ಟು ಮನೆಗಳು ನಿರ್ಮಾಣವಾಗಿದ್ದು, ಜನವಸತಿ ಪ್ರದೇಶವಾಗಿ ಮಾರ್ಪಟ್ಟಿದೆ.
ಪ್ರಸ್ತುತ ರಸ್ತೆಗೆ ಹೊಂದಿಕೊಂಡಂತೆಯೇ ಶವಸಂಸ್ಕಾರ ನಡೆಸುತ್ತಿರುವುದರಿಂದ ಅಂತ್ಯಕ್ರಿಯೆಯ ವೇಳೆ ಉಂಟಾಗುವ ಹೊಗೆ ಹಾಗೂ ದುರ್ವಾಸನೆಯಿಂದ ಸುತ್ತಮುತ್ತಲಿನ ನಿವಾಸಿಗಳು ಹಾಗೂ ಶಾಲಾ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.
ಇದಲ್ಲದೆ, ಸಾರ್ವಜನಿಕ ರಸ್ತೆಯ ಪಕ್ಕದಲ್ಲಿಯೇ ಶವಸಂಸ್ಕಾರ ನಡೆಸುವುದರಿಂದ ಸಾರ್ವಜನಿಕ ಸಂಚಾರಕ್ಕೂ ತೊಂದರೆಯಾಗುತ್ತಿದೆ. ರಸ್ತೆಯಲ್ಲಿ ಸಂಚರಿಸುವ ಚಿಕ್ಕ ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ಶವಸಂಸ್ಕಾರದ ದೃಶ್ಯ ಭಯವನ್ನುಂಟು ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಮಹಾಂತೇಶ ನಗರ ಪ್ರದೇಶದಲ್ಲಿ ಸುಮಾರು 5–6 ಶಾಲೆಗಳು ಹಾಗೂ ಎರಡು ಮಹಿಳಾ ವಸತಿ ನಿಲಯಗಳಿದ್ದು, ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಈ ಪ್ರದೇಶದಲ್ಲಿ ಸಂಚರಿಸುತ್ತಾರೆ. ಹೀಗಾಗಿ ಮಕ್ಕಳ ಆರೋಗ್ಯ, ಸುರಕ್ಷತೆ ಹಾಗೂ ಮಾನಸಿಕ ನೆಮ್ಮದಿಯ ದೃಷ್ಟಿಯಿಂದ ಶವಸಂಸ್ಕಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಅಗತ್ಯವಾಗಿದೆ ಎಂದು ನಿವಾಸಿಗಳು ಮನವಿ ಮಾಡಿದ್ದಾರೆ.
ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಜನವಸತಿ ಪ್ರದೇಶಗಳು, ಶಾಲೆಗಳು ಹಾಗೂ ವಸತಿ ನಿಲಯಗಳಿಂದ ದೂರವಿರುವ ಸೂಕ್ತ ಸ್ಥಳವನ್ನು ಗುರುತಿಸಿ ಅಂತ್ಯಕ್ರಿಯೆ ನಡೆಸಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಅಲ್ಲದೆ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಶವಸಂಸ್ಕಾರ ನಡೆಸುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಸಂಗಪ್ಪ ತಂಗಡಗಿ, ಎಲ್.ಕೆ. ನದಾಫ್, ಎ.ಸಿ. ಪಾಟೀಲ್, ಸಿ.ಎಂ. ಕಲಹಾಳ, ಪಿ.ಎಲ್. ರಾಠೋಡ, ಎಂ.ಎ. ಮ್ಯಾಗೇರಿ, ಎಂ.ಎ. ಮಕಾಂದಾರ, ದಸ್ತಗೀರಸಾಬ್ ಮುದಗಲ್, ಅಮೀರ್ ಹಣಗಿ ಹಾಗೂ ದಾವಲ್ ಮುದಗಲ್ ಸೇರಿದಂತೆ ಮಹಾಂತೇಶ ನಗರದ ನಿವಾಸಿಗಳು ಮನವಿ ಮಾಡಿಕೊಂಡಿದ್ದಾರೆ.
ವರದಿ: ಅಬ್ದುಲ್ ಗಫೂರ್ ಕಡಕೋಳ
ಜಿಲ್ಲಾ ವರದಿಗಾರರು ವಿಜಯಪುರ
Ad

ಕಾಮೆಂಟ್ಗಳು (0)
ಕಾಮೆಂಟ್ ಮಾಡಲು ಲಾಗಿನ್ ಮಾಡಿ.
ಇನ್ನೂ ಯಾವುದೇ ಕಾಮೆಂಟ್ಗಳಿಲ್ಲ. ಮೊದಲಿಗರಾಗಿ!

