ಬ್ರೇಕಿಂಗ್
Ad
SAI CAR CARE
ರಾಜ್ಯ

ಕೀಲುನೋವು: ಕಾರಣಗಳು, ಪರಿಹಾರ ಮತ್ತು ಜೀವನಶೈಲಿ

ಕೀಲುನೋವು ಮಕ್ಕಳು, ಯುವಕರು ಹಾಗೂ ವಯಸ್ಕರು ಸೇರಿದಂತೆ ಎಲ್ಲ ವಯೋಮಾನದವರನ್ನೂ ಬಾಧಿಸಬಹುದಾದ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಮಹಿಳೆಯರಲ್ಲಿ ಹಾರ್ಮೋನು ಬದಲಾವಣೆ, ಋತುಸ್ರಾವ ಮತ್ತು ಋತುಬಂಧದ ನಂತರ ಈ ಸಮಸ್ಯೆ ಹೆಚ್ಚಾಗಬಹುದು. ಅತಿಯಾದ ತೂಕ, ನಿರಂತರ ದೈಹಿಕ ಶ್ರಮ, ಹಳೆಯ ಗಾಯಗಳು, ಉರಿಯೂತ, ಸೋಂಕು, ಸಂಧಿವಾತ, ಅಸ್ಥಿಸಂಧಿವಾತ ಹಾಗೂ ಪೌಷ್ಟಿಕಾಂಶಗಳ ಕೊರತೆ ಮುಂತಾದವು ಕೀಲುನೋವಿಗೆ ಕಾರಣವಾಗಬಹುದು. ಕೀಲುನೋವನ್ನು ನಿರ್ಲಕ್ಷಿಸುವುದರಿಂದ ಚಲನವಲನಕ್ಕೆ ತೊಂದರೆ ಉಂಟಾಗಿ ಜೀವನದ ಗುಣಮಟ್ಟದ ಮೇಲೂ ಪರಿಣಾಮ ಬೀಳಬಹುದು. ಆದ್ದರಿಂದ ನೋವು ನಿರಂತರವಾಗಿದ್ದರೆ ಅಥವಾ ಊತ, ಬಿಗಿತ, ಚಲನೆಗೆ ತೊಂದರೆ ಮುಂತಾದ ಲಕ್ಷಣಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ ಕಾರಣವನ್ನು ಪತ್ತೆಹಚ್ಚುವುದು ಮುಖ್ಯ. ಕೀಲುಗಳ ಆರೋಗ್ಯ ಕಾಪಾಡಿಕೊಳ್ಳಲು ಸಮತೋಲಿತ ಮತ್ತು ಪೌಷ್ಟಿಕ ಆಹಾರ, ಸರಿಯಾದ ತೂಕ, ನಿಯಮಿತ ಕಡಿಮೆ-ಪರಿಣಾಮದ ವ್ಯಾಯಾಮ, ಅಗತ್ಯ ವಿಶ್ರಾಂತಿ ಮತ್ತು ಉತ್ತಮ ಜೀವನಶೈಲಿ ಸಹಾಯಕವಾಗಬಹುದು. ಹಣ್ಣುಗಳು, ತರಕಾರಿಗಳು, ಒಮೆಗಾ-3 ಹೊಂದಿರುವ ಆಹಾರಗಳು ಹಾಗೂ ಇತರೆ ಪೌಷ್ಟಿಕ ಆಹಾರಗಳನ್ನು ಸೇವಿಸುವುದು ಒಟ್ಟಾರೆ ಆರೋಗ್ಯಕ್ಕೆ ಉಪಯುಕ್ತ. ಧೂಮಪಾನವನ್ನು ತ್ಯಜಿಸುವುದೂ ಮೂಳೆ ಮತ್ತು ಕೀಲುಗಳ ಆರೋಗ್ಯಕ್ಕೆ ಮುಖ್ಯ. ಕೀಲುನೋವಿನ ಚಿಕಿತ್ಸೆಯು ಅದರ ಮೂಲ ಕಾರಣ ಮತ್ತು ತೀವ್ರತೆಯನ್ನು ಅವಲಂಬಿಸಿರುತ್ತದೆ. ಔಷಧಿ, ವ್ಯಾಯಾಮ/ಫಿಸಿಯೋಥೆರಪಿ, ಅಗತ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆ ಸೇರಿದಂತೆ ವಿವಿಧ ಚಿಕಿತ್ಸಾ ವಿಧಾನಗಳು ಲಭ್ಯವಿವೆ. ಯಾವುದೇ ಮನೆಮದ್ದು, ಎಣ್ಣೆ ಮಸಾಜ್ ಅಥವಾ ಆಯುರ್ವೇದ ಚಿಕಿತ್ಸೆಯನ್ನು ವೈದ್ಯರ ಸಲಹೆಯೊಂದಿಗೆ ಬಳಸುವುದು ಸೂಕ್ತ. ನೋವನ್ನು ಸಹಿಸಿಕೊಂಡು ನಿರ್ಲಕ್ಷಿಸುವ ಬದಲು, ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಲಹೆ ಪಡೆದು ಕಾರಣವನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದು ಕೀಲುಗಳ ಆರೋಗ್ಯ ಕಾಪಾಡಿಕೊಳ್ಳುವ ಪ್ರಮುಖ ಮಾರ್ಗವಾಗಿದೆ.

ನ
ನಮಸ್ತೆ ಕರ್ನಾಟಕ ಡೆಸ್ಕ್
20/9/2026 · 73 views
Ad
ನಮಸ್ತೆ ಕರ್ನಾಟಕ
ಕೀಲುನೋವು ಕೀಲು (ಸಂಧಿ) ಎಂದರೆ ದೇಹದಲ್ಲಿನ ಮೂಳೆಗಳ ಮಧ್ಯೆ ಆಗಿರುವ ಸೇರಿಕೆ. ಇವು ಅಸ್ಥಿಪಂಜರವನ್ನು ಕಾರ್ಯಾತ್ಮಕ ಸಮಷ್ಟಿಯಾಗಿ ಸೇರಿಸುತ್ತವೆ. ಇವು ವಿವಿಧ ಪ್ರಮಾಣಗಳ ಮತ್ತು ಪ್ರಕಾರಗಳ ಚಲನೆಗೆ ಅವಕಾಶವಾಗುವಂತೆ ನಿರ್ಮಾಣಗೊಂಡಿರುತ್ತವೆ. ಕೀಲುನೋವಿನ ಸಮಸ್ಯೆಯಿಂದ ನರಳುವವರಲ್ಲಿ ಮಹಿಳೆಯರು ಹೆಚ್ಚು. ಕೀಲುನೋವಿನಲ್ಲೂ ಅನ್ಯಪ್ರಕಾರಗಳಿವೆ. ಹಲವಾರು ಕಾರಣಗಳಿವೆ. ಶಿಶುವಿನಿಂದ ಹಿಡಿದು ಹಿರಿಯ ವಯಸ್ಕರನ್ನು ಸಹ ಈ ಸಮಸ್ಯೆ ಬಾಧಿಸುತ್ತದೆ. ಸಂಕಷ್ಟಕ್ಕೀಡು ಮಾಡುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಅನೇಕರು ಇದಕ್ಕೆ ಚಿಕಿತ್ಸೆ ಬಯಸುವುದಕ್ಕಿಂತಲೂ ಹೆಚ್ಚಾಗಿ ಅದರ ತೀವ್ರತೆಯನ್ನು ಸಹನೀಯ ಮಟ್ಟಕ್ಕೆ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಕೀಲುನೋವು ನಮ್ಮ ಚಲನಶೀಲತೆಯಿಂದ ಕೂಡಿದ ಬಯಕೆಗೆ ಕಡಿವಾಣ ಹಾಕುತ್ತದೆ. ಸಮಾಜ ಜೀವಿಯಾದ ಮನುಜನನ್ನು ನೋವೆಂಬ ಆರೋಗ್ಯ ಸಮಸ್ಯೆ ಸಮಾಜದಿಂದ ದೂರವುಳಿಸುವುದರಿಂದ ಆತ ಖಿನ್ನತೆಗೊಳಗಾಗುತ್ತಾನೆ. ಶಾರೀರಿಕ ನೋವನ್ನು ನಾವೆಲ್ಲ ಅನುಭವಿಸಿರುತ್ತೇವೆ. ಪುರುಷರು ಹಾಗೂ ಮಹಿಳೆಯರು ಕೀಲುನೋವಿಗೆ ಸ್ಪಂದಿಸುವ ರೀತಿ, ಅನುಭವದಲ್ಲೂ ವ್ಯತ್ಯಾಸಗಳಿವೆಯೆಂದು ವೈಜ್ಞಾನಿಕ ವಲಯ ವರದಿ ಮಾಡಿದೆ. ಅದಕ್ಕೆ ಕೆಲ ಕಾರಣಗಳನ್ನು ಗುರುತಿಸಿದೆ. ಬಡಕುಟುಂಬದ ಮಹಿಳೆಯರು ಕೀಲುನೋವಿನಿಂದ ನರಳುತ್ತಾರೆ. ವೈದ್ಯರನ್ನು ಕಾಣದೇ ಕಾಲ ಕಳೆಯುತ್ತಾರೆ. ಅದಕ್ಕೆ ಸಾಮಾಜಿಕ ಕಾರಣಗಳು ಹಲವು. ಕೆಲವೊಮ್ಮೆ ದುಡಿಯುವ ಕೂಲಿಕಾರ್ಮಿಕರಿಗೆ ಅವರ ಕುಟುಂಬದವರು ಹಣ ಖರ್ಚಾಗುವುದೆಂದು ಸೂಕ್ತ ಚಿಕಿತ್ಸೆ ಒದಗಿಸಲು ಅಂಜುತ್ತಾರೆ. ಕೆಲ ತಾಯಂದಿರು ತಮ್ಮ ಮಕ್ಕಳನ್ನು ನೆನೆದು ನೋವು ನುಂಗುತ್ತಾ ನಿರಂತರವಾಗಿ ದುಡಿಯುತ್ತಾರೆ. ಕಾರಣಗಳು ಮಹಿಳೆಯರಲ್ಲಿ ‘ಈಸ್ಟ್ರೋಜನ್’ ಎಂಬ ಹಾರ್ಮೋನು ಮೂಳೆ-ಕೀಲುಗಳನ್ನು ಉರಿಯೂತ, ಸವೆತದಿಂದ ರಕ್ಷಿಸುತ್ತದೆ. ಈಸ್ಟ್ರೋಜನ್‍ನ ಪ್ರಮಾಣ ಋತುಸ್ರಾವದ ಸಮಯದಲ್ಲಿ ಕುಂಠಿತಗೊಳ್ಳುತ್ತದೆ. ಹಾಗಾಗಿ ಮಹಿಳೆಯರಲ್ಲಿ ಮುಟ್ಟಿನ ಸಂದರ್ಭದಲ್ಲಿ ಮೈ-ಕೈ ನೋವು, ಕೀಲುನೋವು ಉಲ್ಬಣಗೊಳ್ಳುತ್ತದೆ. ಮಹಿಳೆಯರಲ್ಲಿ ಋತುಬಂಧದ ನಂತರ ಕೀಲು ಸಂಬಂಧಿ ಸಮಸ್ಯೆ ಹೆಚ್ಚಲು ಈಸ್ಟ್ರೋಜನ್‍ನ ಪ್ರಮಾಣದ ಕೊರತೆ ಬಹುಮುಖ್ಯ ಕಾರಣ. ಮಹಿಳೆಯರು ದೈಹಿಕ ನೋವಿಗೆ ಹೆಚ್ಚು ಸೂಕ್ಷ್ಮತೆಯನ್ನು ಪ್ರಕಟಿಸಲು ಎಂಡೋರ್ಫಿನ್‍ಗಳು ಹಾಗೂ ಇತರೆ ಮೆದುಳು ಸ್ರವಿಸುವ ಡೋಪಮೈನ್‍ನಂತಹ ರಾಸಾಯನಿಕಗಳ ಕೊರತೆಯು ಕಾರಣ ಎಂಬ ವರದಿಗಳು ಇವೆ. ತೂಕ ಅತಿಯಾದಾಗಲೂ ಕೀಲು ಸಂಬಂಧಿ ಅದರಲ್ಲೂ ಮುಖ್ಯವಾಗಿ ಮಂಡಿನೋವಿನ ಸಮಸ್ಯೆ ಹೆಚ್ಚುತ್ತದೆ. ವಿಶ್ರಾಂತಿಯಿಲ್ಲದ ನಿರಂತರ ಶಾರೀರಿಕ ಶ್ರಮವೂ ಕೀಲುನೋವಿಗೆ ಕಾರಣವಾಗಬಲ್ಲದು. ಬಗ್ಗಿ ನೆಲ ಒರೆಸುವುದು, ನಿಂತುಕೊಂಡೇ ಅಡುಗೆ ಮಾಡುವುದು ಹೆಂಗಸರ ದಿನನಿತ್ಯದ ಕೆಲಸವಾಗಿರುವುದರಿಂದಲೂ ಅವರಲ್ಲಿ ಸೊಂಟ-ಮಂಡಿನೋವಿನ ಸಮಸ್ಯೆ ಹೆಚ್ಚು. ಜೀರ್ಣಕ್ರಿಯೆಯಲ್ಲಿನ ಏರು-ಪೇರುಗಳು ಕೂಡ, ಯೂರಿಕ್ ಆಂಟಾಸಿಡ್‍ನಂತಹ ರಾಸಾಯನಿಕಗಳು ದೇಹದಲ್ಲಿ ಶೇಖರಣೆಗೊಳ್ಳಲು ಕಾರಣವಾಗುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಕುಂಠಿತಗೊಂಡಾಗಲೂ ಮೂಳೆ-ಕೀಲುನೋವಿನ ತೊಂದರೆ ತಲೆದೋರಬಹುದು ಸೂಕ್ತವಾದ ಆಹಾರ ಸೇವಿಸದಿದ್ದಲ್ಲಿ ಪೌಷ್ಟಿಕಾಂಶಗಳ ಕೊರತೆಯಿದ್ದಾಗಲೂ ಮೂಳೆ-ಕೀಲುಗಳು ದುರ್ಬಲಗೊಂಡು ವ್ಯಕ್ತಿ ನರಳುವಂತಾಗುತ್ತದೆ. ಕೆಲವೊಮ್ಮೆ ಕೀಲು-ಸಂಧಿವಾತ ಬಹು ಹಿಂದೆ ಉಂಟಾದ ಗಾಯ-ಹಳೆ ನೋವಿಗೂ ಸಂಬಂಧಿಸಿರಬಹುದು. ಹಾಗಾಗಿ ಕೀಲುಗಳಿಗೆ ಬಲವಾದ ಏಟು ಬಿದ್ದಿದ್ದಲ್ಲಿ ಆ ಮಾಹಿತಿಯನ್ನು ವೈದ್ಯರಿಗೆ ತಿಳಿಸಿ. ವಯಸ್ಕರಲ್ಲಿ ಜಾರಿ ಬೀಳುವ ಸಮಸ್ಯೆ ಹೆಚ್ಚಾಗಿದ್ದು. ಆಘಾತ ಸಂಬಂಧಿ ನೋವು-ಮೂಳೆ ಮುರಿತದ ಕುರಿತು ನಾವು ಜಾಗೃತೆ ವಹಿಸಬೇಕು. ಕೆಲರಲ್ಲಿ ಮುಂಗೈ ಸಣ್ಣ ಗಂಟಿನ ನೋವು ಮುಂಜಾನೆ ವೇಳೆಯಲ್ಲಿ ತಂಪಾದ ವಾತಾವರಣದಲ್ಲಿ ಹೆಚ್ಚಾಗಿರಬಹುದು. ಕೆಲ ಚರ್ಮರೋಗಗಳಲ್ಲೂ ಕೀಲುನೋವು ಉಲ್ಬಣಗೊಳ್ಳುತ್ತದೆ. ಅಂಗಾಂಗಗಳ-ಮೂಳೆಗಳ ವಿಕೃತಿಗೂ-ಊನತೆಗೂ ಕೆಲ ರೋಗಗಳು ಕಾರಣವಾಗಬಹುದು. ಹಾಗಾಗಿ ಈ ರೋಗ ಗುಣ-ಲಕ್ಷಣಗಳನ್ನು ನಿರ್ಲಕ್ಷಿಸದೇ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು. ಕೆಲ ಹೃದ್ರೋಗಗಳಿಗೂ-ಮೂಳೆ ಸಂಬಂಧಿ ಕಾಯಿಲೆಗಳಿಗೂ ಸಂಬಂಧವಿರಬಹುದು. ಮಕ್ಕಳಲ್ಲೂ ಹುಟ್ಟಿನಿಂದಲೂ ಕೆಲ ಬಗೆಯ ಕೀಲುನೋವು ತಲೆದೋರಬಹುದು. ಜನರಿಗೆ ನೋವಿನಿಂದ ಕ್ಷಣಿಕ ಮುಕ್ತಿ ಬೇಕು ಅಷ್ಟೆ. ಹಾಗಾಗಿ ನೋವಿನ ಕಾರಣ ಕೆಲವರಲ್ಲಷ್ಟೆ ಪತ್ತೆ ಹಚ್ಚಲಾಗುತ್ತದೆ. ಕೀಲುನೋವಿಗೆ ವಯಸ್ಸು, ಸೋಂಕು, ಉರಿಯೂತ, ಆಘಾತ-ಹೀಗೆ ನೂರಾರು ಕಾರಣಗಳಿರಬಹುದು. ಕೀಲು ನೋವಿನ ಪ್ರಮುಖ ಕಾರಣಗಳಲ್ಲಿ ರೂಮೆಟಾಯ್ಡ್ ಅರ್ಥೈಟಿಸ್ ಒಂದಾಗಿದೆ. ಇವುಗಳೊಡನೆ ಲ್ಯೂಪಸ್, ಸ್ಕೆರೋಡರ್ಮಾ, ಫೈಬ್ರೋಮಯಾಲ್ಜಿಯಾ ಇತ್ಯಾದಿಗಳೂ ಕೀಲುನೋವಿಗೆ ಕಾರಣವಾಗಿರಬಲ್ಲವು. ಆದರೆ ರೋಗಿ ನಿರಂತರವಾಗಿ ವೈದ್ಯರ ಸಂಪರ್ಕ ದಲ್ಲಿರದಿದ್ದರೆ ಇವುಗಳನ್ನು ಪತ್ತೆ ಹಚ್ಚುವುದು ಕಷ್ಟ. ಕೆಲ ರೋಗ ಪತ್ತೆ ಹಚ್ಚಲು ದುಬಾರಿ ಲ್ಯಾಬೋರೇಟರಿ ಟೆಸ್ಟ್‍ ಗಳನ್ನು ಮಾಡಬೇಕಾಗಬಹುದು. ಮೊಣಕಾಲುಗಳು, ಪಾದದ ಅಥವಾ ಸೊಂಟದಲ್ಲಿನ ಆ ನೋವಿನ ಹಿಂದಿನ ಕಾರಣಗಳು ಕೀಲು ಸುತ್ತಲಿನ ಅಸ್ಥಿರಜ್ಜುಗಳು, ಬುರ್ಸೆ ಅಥವಾ ಸ್ನಾಯುಗಳ ಮೇಲೆ ಪರಿಣಾಮ ಬೀರುವ ಗಾಯದಿಂದಾಗಿರಬಹುದು. ಕೆಲವೊಮ್ಮೆ ಕೀಲು ಒಳಗೆ ಕಾರ್ಟಿಲೆಜ್ ಮತ್ತು ಮೂಳೆಗಳ ಗಾಯವು ದೀರ್ಘಕಾಲದ ನೋವಿಗೆ ಕಾರಣವಾಗುತ್ತದೆ. ಈ ರೀತಿಯ ನೋವಿನ ಮತ್ತೊಂದು ಕಾರಣವೆಂದರೆ ಕೀಲು ಉರಿಯೂತ, ಇದು ಸಂಧಿವಾತ ಮತ್ತು ಅಸ್ಥಿಸಂಧಿವಾತಕ್ಕೆ ಕಾರಣವಾಗುತ್ತದೆ. ಆದರೆ ಯಾವುದೇ ಕಾರಣವಿರಲಿ, ಅದು ನಿಮ್ಮ ಜೀವನದ ಗುಣಮಟ್ಟವನ್ನು ರಾಜಿ ಮಾಡಬಹುದು ಮತ್ತು ಕಾಲಾನಂತರದಲ್ಲಿ ನಿಮ್ಮನ್ನು ಇತರರ ಮೇಲೆ ಅವಲಂಬಿತವಾಗಿಸಬಹುದು. ಅದಕ್ಕಾಗಿಯೇ ಈ ಸ್ಥಿತಿಯನ್ನು ಶೀಘ್ರವಾಗಿ ನಿಯಂತ್ರಣಕ್ಕೆ ತರುವುದು ಬಹಳ ಮುಖ್ಯ. ಚಿಕಿತ್ಸೆ ಹಿಂದೆಲ್ಲ ಕೀಲುನೋವು ವಯಸ್ಸಾದವರ ಸಮಸ್ಯೆ ಎಂದು ಭಾವಿಸಲಾಗಿತ್ತು. ಕೀಲುನೋವು ಆರಂಭವಾದರೆ ಜೀವನ ಪರ್ಯಂತವೆಂದು ಕಲ್ಪಿಸಿಕೊಳ್ಳಲಾಗುತ್ತಿತ್ತು. ಆದರೆ ಇಂದು ಇವುಗಳ ಚಿಕಿತ್ಸೆಯಲ್ಲಿ ನಾವು ಹಲವು ಮೈಲಿಗಲ್ಲನ್ನು ಸಾಧಿಸುತ್ತಿದ್ದು, ಆಯುರ್ವೇದ ಪದ್ಧತಿಯಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಉತ್ತಮ ಚಿಕಿತ್ಸೆ ಇದೆ. ವಿಶ್ರಾಂತಿ, ಸೂಕ್ತ ಆಹಾರ, ವ್ಯಾಯಾಮಗಳು ಮೂಳೆ ಸಂಬಂಧಿ ಅನೇಕ ತೊಂದರೆಗಳಿಂದ ದೂರವಿರಲು ಹಾಗೂ ಉಲ್ಬಣಗೊಳ್ಳದಂತೆ ನಿಯಂತ್ರಿಸುವುದು ಅಗತ್ಯ. ಆಯುರ್ವೇದದಲ್ಲಿ ಪಂಚಕರ್ಮ ಮತ್ತು ಔಷಧಿ ಉತ್ತಮವಾದ ಪರಿಹಾರ ನೀಡಬಲ್ಲದು. ಚಿಕಿತ್ಸೆ ಸ್ವಲ್ಪ ದುಬಾರಿಯೆನಿಸಿದರೂ ಜನರಲ್ಲಿ ನೋವಿನಿಂದ ಮುಕ್ತಿ ಪಡೆಯಲು ರೋಗಿ ಕೆಲವೊಮ್ಮೆ ಜೀವನದಲ್ಲಿ ವೈಯಕ್ತಿಕ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಪುರುಷರಿಗಿಂತಲೂ ಮಹಿಳೆಯರಿಗೆ ಇದೊಂದು ಸವಾಲೇ ಸರಿ. ಮಹಿಳೆಯರ ಶಾರೀರಿಕ ರಚನೆ ಹಾಗೂ ಕಾರ್ಯಚಟುವಟಿಕೆಯನ್ನು ನೋವು ಸಹಿಸಿಕೊಳ್ಳುವ ಶಕ್ತಿ ಆಧರಿತವಾಗಿದೆ. ಮೂಳೆ-ಕೀಲುವಾತದಿಂದ ನರಳುವರು ಶಿಸ್ತುಬದ್ಧ, ಪೌಷ್ಟಿಕಾಂಶಯುಕ್ತ ಆಹಾರಕ್ರಮ ವ್ಯಾಯಮ, ಸೂಕ್ತ ವಿಶ್ರಾಂತಿಯಿಂದ ಕೂಡಿದ ದಿನಚರಿಯನ್ನು ಪಾಲಿಸಲು ಯತ್ನಿಸಬೇಕು. ಮೂಳೆ-ಕೀಲುನೋವಿನ ಸಮಸ್ಯೆಗೆ ಔಷಧ-ಶಸ್ತ್ರಕ್ರಿಯೆ-ಆಯುರ್ವೇದ ನೈಸರ್ಗಿಕ ಚಿಕಿತ್ಸೆಗಳು ಲಭ್ಯವಿವೆ. ಹಾಗಾಗಿ ಈ ಸಮಸ್ಯೆಯಿಂದ ನರಳುತ್ತಿರುವವರು ರೋಗದ ತೀವ್ರತೆ ಇತ್ಯಾದಿಗಳನ್ನಾಧರಿಸಿ ಚಿಕಿತ್ಸಾಕ್ರಮವನ್ನು ಆಯ್ದುಕೊಳ್ಳಬೇಕು. ಕೆಲವರು ಮೌನವಾಗಿ ಸಹಿಸಿಕೊಳ್ಳುತ್ತಾರೆ. ಆದರೆ ಮೌನ, ಸಹನೆ, ರೋಗ ನಿರ್ಲಕ್ಷ್ಯ ರೋಗವನ್ನು ಇನ್ನಷ್ಟು ಗಂಭೀರವಾಗಿಸಬಲ್ಲದು ಎಂಬುದನ್ನು ನಾವು ಮರೆಯ ಕೂಡದು. ಮೊದಲೆಲ್ಲಾ ಕೀಲು ನೋವಿನ ಸಮಸ್ಯೆ ಒಂದು ವಯೋಸಹಜ ಕಾಯಿಲೆ ಆಗಿತ್ತು. ಆದರೆ, ಇಂದಿನ ಯುಗದಲ್ಲಿ ಹಲವರು ಚಿಕ್ಕ ವಯಸ್ಸಿನಲ್ಲಿಯೇ ಕೀಲು ನೋವಿನ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ. ಅನಿಯಮಿತ ಆಹಾರ ಪದ್ಧತಿ, ತಪ್ಪಾದ ಜೀವನಶೈಲಿಯೂ ಇದಕ್ಕೆ ಬಹಳ ಮುಖ್ಯ ಕಾರಣ. ಕೀಲು ನೋವಿನ ಸಮಸ್ಯೆಯಿಂದ ದೀರ್ಘಕಾಲದವರೆಗೆ ಕೂರುವುದಾಗಲಿ, ನಡೆಯುವುದಾಗಲಿ ಬಹಳ ಕಷ್ಟಕರ ಎಂದೆನಿಸುತ್ತದೆ. ಇದು ಭವಿಷ್ಯದಲ್ಲಿ ಇನ್ನೂ ಹಲವು ರೋಗಗಳಿಗೆ ಆಹ್ವಾನವನ್ನು ನೀಡುತ್ತದೆ. ವಾಸ್ತವವಾಗಿ, ವಯಸ್ಸಾದಂತೆ, ಸ್ನಾಯುಗಳು ಹಿಗ್ಗಲು ಪ್ರಾರಂಭಿಸುತ್ತವೆ. ಇದರಿಂದಾಗಿ ಕೀಲುಗಳ ಸುತ್ತಲಿನ ನರಗಳಲ್ಲಿ ಊತದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಕಾರಣದಿಂದಾಗಿ ಕೀಲುಗಳಲ್ಲಿ ಬಿಗಿತ ಹೆಚ್ಚಾಗಿ ನೋವು ಕೂಡ ಉಲ್ಬಣಿಸುತ್ತದೆ. ಜೀವನಶೈಲಿ ಮತ್ತು ಆಹಾರ ಪದ್ಧತಿ ಇವತ್ತಿನ ದಿನಗಳಲ್ಲಿ ಬಹುತೇಕ ಕಾಯಿಲೆಗಳು ಜೀವನ ಶೈಲಿಯಿಂದಲೇ ಪ್ರಾರಂಭವಾಗುತ್ತದೆ. ಅದರಲ್ಲಿ ಕೀಲು ನೋವು ಕೂಡ ಒಂದು. ಒಬ್ಬ ಆರೋಗ್ಯವಂತ ಮನುಷ್ಯ ಸುಮ್ಮನೇ ಕೂರುವಂತಿಲ್ಲ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ದೈಹಿಕ ಚಟುವಟಿಕೆಯುಳ್ಳ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ಹಸಿವಾದಾಗ ಊಟ ಮಾಡಬೇಕು. ದುಡಿಮೆಯಿಂದ ದೈಹಿಕ ದಣಿವು ಉಂಟಾದಾಗ ರಾತ್ರಿ ಸರಾಗವಾಗಿ ನಿದ್ದೆ ಹತ್ತುತ್ತದೆ. ಮನುಷ್ಯನ ದೇಹದಲ್ಲಿ ಎಲ್ಲವೂ ಸಮತೋಲನದಲ್ಲಿರುತ್ತದೆ. ಆ ಮೂಲಕ ಅನಾರೋಗ್ಯ ಆತನ ಹತ್ತಿರವೂ ಸುಳಿಯುವುದಿಲ್ಲ. ಆದರೆ ಇಂದು ಬದಲಾದ ಜೀವನ ಶೈಲಿ ಎಲ್ಲವನ್ನು ಬದಲಿಸಿದೆ. ವೈದ್ಯರ ಭೇಟಿಯು ಸಹಾಯ ಮಾಡುತ್ತದೆ ಮತ್ತು ನೀವು ಬೇಗನೆ ಅದನ್ನು ಮಾಡಬೇಕು. ಇದರೊಂದಿಗೆ ನಿಮ್ಮ ಕೀಲಿನ ಆರೋಗ್ಯವನ್ನು ಹೆಚ್ಚಿಸಲು ನೀವು ಕೆಲವು ಕ್ರಮಗಳನ್ನು ಸಹ ತೆಗೆದುಕೊಳ್ಳಬಹುದು. ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಸಣ್ಣ ಬದಲಾವಣೆಗಳು ನಿಮಗೆ ಪರಿಹಾರ ನೀಡುವಲ್ಲಿ ಬಹಳಸಹಕಾರಿಯಾಗಲಿವೆ. ಕೀಲು ನೋವಿಗೆ ಸಿಟ್ರಸ್ ಹಣ್ಣುಗಳು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ವಿಟಮಿನ್ ಸಿ ಹೆಚ್ಚಾಗಿರುವ ನಿಂಬೆ ಮತ್ತು ಕಿತ್ತಳೆಯಂತಹ ಹಣ್ಣುಗಳನ್ನು ಸೇವಿಸುವುದರಿಂದ ಕೀಲು ನೋವು ಕಡಿಮೆ ಆಗುತ್ತದೆ. ಇದಲ್ಲದೆ, ಈ ಹಣ್ಣುಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಶುಂಠಿ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ಶುಂಠಿ ಸೇವನೆಯಿಂದ ಶೀತ, ವಾಯು ಕಡಿಮೆ ಆಗುತ್ತದೆ. ಶುಂಠಿಯಲ್ಲಿ ಜಿಂಜೆರಾಲ್ ಎಂಬ ಅಂಶವಿದೆ. ಇದು ಕೀಲು ನೋವನ್ನು ಹೊರತುಪಡಿಸಿ ಸ್ನಾಯುವಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ರಸವನ್ನು ಪ್ರತಿದಿನ ಸೇವಿಸುವುದರಿಂದ ನೋವು ನಿವಾರಣೆಯಾಗುತ್ತದೆ. ವೈದ್ಯರ ಸಲಹೆ ಪಡೆದು ಶುಂಠಿ ಎಣ್ಣೆಯಿಂದ ಮೊಣಕಾಲು ಮತ್ತು ಸೊಂಟದ ಬಾಧಿತ ಭಾಗವನ್ನು ಮಸಾಜ್ ಮಾಡುವುದರಿಂದ ನೋವು ನಿವಾರಣೆಯಾಗುತ್ತದೆ. ತಜ್ಞರ ಪ್ರಕಾರ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವನೆಯಿಂದ ಕೀಲು ನೋವು ನಿವಾರಣೆಯಾಗುತ್ತದೆ . ಅವುಗಳಲ್ಲಿರುವ ಅಂಶಗಳು ಕೀಲು ನೋವಿಗೆ ಪ್ರಯೋಜನಕಾರಿ. ಇದಕ್ಕಾಗಿ, ಹತ್ತು ಬೆಳ್ಳುಳ್ಳಿ ಮೊಗ್ಗುಗಳನ್ನು 100 ಗ್ರಾಂ ನೀರು ಅಥವಾ ಹಾಲಿನೊಂದಿಗೆ ಬೆರೆಸಿ ಕುಡಿಯಿರಿ. ಇದರಿಂದ ಶೀಘ್ರ ಪರಿಹಾರ ಪಡೆಯಬಹುದು. ಆಹಾರದಲ್ಲಿ ಸಾಕಷ್ಟು ಪ್ರಮಾಣದ ಅರಿಶಿನವನ್ನು ಪ್ರತಿದಿನ ಬೆರೆಸಿ ಸೇವಿಸುವುದರಿಂದ ಕೀಲು ನೋವು ಕಡಿಮೆಯಾಗುತ್ತದೆ. ಅರಿಶಿನದಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ ಗುಣಗಳು ಕೀಲುಗಳ ನಡುವಿನ ಉರಿಯೂತವನ್ನು ನಿವಾರಿಸುತ್ತದೆ. ಬಾದಾಮಿಯಲ್ಲಿ ಒಮೆಗಾ 3 ಹೆಚ್ಚು ಕಂಡುಬರುತ್ತದೆ. ಇದಲ್ಲದೆ, ಮೀನು ಮತ್ತು ಕಡಲೆಕಾಯಿಯಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳಿವೆ. ಇವುಗಳ ಸೇವನೆಯಿಂದಲೂ ಕೀಲು ನೋವಿನಿಂದ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ. ಕೀಲು ನೋವಿನಿಂದ ಬಳಲುತ್ತಿರುವವರು ವೈದ್ಯರ ಸಲಹೆ ಪಡೆದು ಪೀಡಿತ ಪ್ರದೇಶವನ್ನು ತೆಂಗಿನಕಾಯಿ, ಆಲಿವ್, ಸಾಸಿವೆ, ಕ್ಯಾಸ್ಟರ್ ಅಥವಾ ಬೆಳ್ಳುಳ್ಳಿ ಎಣ್ಣೆಯಿಂದ ಮಸಾಜ್ ಮಾಡಿ. ಇದು ಕೀಲು ನೋವಿನಿಂದ ಪರಿಹಾರವನ್ನು ನೀಡುತ್ತದೆ. ಕೀಲಿನ ಸಮಸ್ಯೆಗಳಿರುವ ಅನೇಕ ಜನರು ನೋವನ್ನು ಮತ್ತಷ್ಟು ಉಲ್ಬಣಗೊಳಿಸಬಹುದೆಂಬ ಭಯದಿಂದ ವ್ಯಾಯಾಮ ಮಾಡಲು ಹೆದರುತ್ತಾರೆ. ಆದರೆ ನಿಯಮಿತವಾಗಿ ಕಡಿಮೆ-ಪರಿಣಾಮದ ವ್ಯಾಯಾಮಗಳು ಕೀಲುಗಳ ಆರೋಗ್ಯಕ್ಕೆ ಒಳ್ಳೆಯದು. ನೀವು ಅಧಿಕ ತೂಕ ಹೊಂದಿದ್ದರೆ, ನಿಮ್ಮ ಕೀಲುಗಳಿಗೆ ಹೆಚ್ಚುವರಿ ಒತ್ತಡವನ್ನು ಹಾಕುತ್ತೀರಿ. ಇದು ಮೊಣಕಾಲು ಮತ್ತು ಪಾದದ ನೋವಿಗೆ ಕಾರಣವಾಗುತ್ತದೆ. ನಿಮ್ಮ ಕೀಲುಗಳು ಆರೋಗ್ಯಕರವಾಗಿ ಮತ್ತು ಸಂತೋಷವಾಗಿರಲು ತೂಕವನ್ನು ಕಳೆದುಕೊಳ್ಳಿ. ಧೂಮಪಾನವು ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ಮುರಿತದ ಅಪಾಯವನ್ನು ಹೆಚ್ಚಿಸುತ್ತದೆ. ಇದು ನಿಮ್ಮನ್ನು ಸ್ನಾಯುರಜ್ಜು ಉರಿಯೂತಕ್ಕೆ ಗುರಿಯಾಗಿಸಬಹುದು. ನೀವು ಉತ್ತಮ ಕೀಲುಗಳನ್ನು ಪಡೆಯಲು ಬಯಸಿದರೆ, ನೀವು ಧೂಮಪಾನವನ್ನು ನಿಲ್ಲಿಸಬೇಕು. ಡಾll ನಾಗರಾಜ್.ಕಾಮತ್ ಎಂ.ಡಿ (ಆಯು)
Ad
ನಮಸ್ತೆ ಕರ್ನಾಟಕ

ಕಾಮೆಂಟ್‌ಗಳು (0)

ಕಾಮೆಂಟ್ ಮಾಡಲು ಲಾಗಿನ್ ಮಾಡಿ.

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ!