ಬ್ರೇಕಿಂಗ್
ರಾಜ್ಯ

ದಲಿತ ಕಾಲೋನಿ ಬಳಿಯ ಮಲ-ಮೂತ್ರ ಸಂಸ್ಕರಣ ಘಟಕ ಸ್ಥಳಾಂತರಕ್ಕೆ ದಲಿತ ಸಂಘರ್ಷ ಸಮಿತಿ ಆಗ್ರಹ

ಹೂನಗನಹಳ್ಳಿ ಗ್ರಾಮದ ದಲಿತ ಕಾಲೋನಿಯ ಬಳಿ ಸಾರ್ವಜನಿಕರ ಆರೋಗ್ಯಕ್ಕೆ ಮಾರಕವಾಗುವಂತೆ ನಿಯಮಬಾಹಿರವಾಗಿ ಸ್ಥಾಪಿಸಲಾಗುತ್ತಿರುವ ಮಲ-ಮೂತ್ರ ಸಂಸ್ಕರಣ ಘಟಕವನ್ನು ತಕ್ಷಣವೇ ಸ್ಥಳಾಂತರಿಸಬೇಕೆಂದು ಆಗ್ರಹಿಸದರು.

ನಮಸ್ತೆ ಕರ್ನಾಟಕ ಡೆಸ್ಕ್
23 ಗಂಟೆಗಳ ಹಿಂದೆ · 11 views
ದಲಿತ ಕಾಲೋನಿ ಬಳಿಯ ಮಲ-ಮೂತ್ರ ಸಂಸ್ಕರಣ ಘಟಕ ಸ್ಥಳಾಂತರಕ್ಕೆ ಆಗ್ರಹಿಸಿ ಹೊನಗನಹಳ್ಳಿ ಗ್ರಾ.ಪಂ.ಗೆ ಮುತ್ತಿಗೆ: ಅಧಿಕಾರಿಗಳ ಭರವಸೆಯ ಮೇರೆಗೆ ಪ್ರತಿಭಟನೆ ತಾತ್ಕಾಲಿಕ ಮುಂದೂಡಿಕೆ ವಿಜಯಪುರ: ಗ್ರಾಮದ ದಲಿತ ಕಾಲೋನಿಯ ಬಳಿ ಸಾರ್ವಜನಿಕರ ಆರೋಗ್ಯಕ್ಕೆ ಮಾರಕವಾಗುವಂತೆ ನಿಯಮಬಾಹಿರವಾಗಿ ಸ್ಥಾಪಿಸಲಾಗುತ್ತಿರುವ ಮಲ-ಮೂತ್ರ ಸಂಸ್ಕರಣ ಘಟಕವನ್ನು ತಕ್ಷಣವೇ ಸ್ಥಳಾಂತರಿಸಬೇಕೆಂದು ಆಗ್ರಹಿಸಿ, ಸೋಮವಾರ (ಜುಲೈ 20) ದಲಿತ ಸಂಘರ್ಷ ಸಮಿತಿ ಹಾಗೂ ಗ್ರಾಮಸ್ಥರು ಹೊನಗನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು. ಪರಿಸರ ಸಚಿವಾಲಯ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಗಾಳಿಗೆ ತೂರಿ, ನಿವಾಸಿಗಳಿಂದ ಯಾವುದೇ ಒಪ್ಪಿಗೆ ಪಡೆಯದೆ ತಾರತಮ್ಯದಿಂದ ಈ ಘಟಕವನ್ನು ಸ್ಥಾಪಿಸಲಾಗುತ್ತಿದೆ. ತಾರತಮ್ಯದಿಂದ ದಲಿತರ ಬಡಾವಣೆಯನ್ನೇ ಗುರಿಯಾಗಿಸಿಕೊಂಡು ಹಾನಿಕಾರಕ ತ್ಯಾಜ್ಯ ಘಟಕ ನಿರ್ಮಿಸುತ್ತಿರುವುದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಗಂಭೀರ ಅಪರಾಧವಾಗಿದೆ. ಈ ಕುರಿತು ಏಪ್ರಿಲ್ 15ರಂದೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಆಡಳಿತ ಮಂಡಳಿ ಸಂಪೂರ್ಣ ನಿರ್ಲಕ್ಷಿಸಿದೆ. ಇದು ಸಾರ್ವಜನಿಕ ಆರೋಗ್ಯ ರಕ್ಷಿಸಬೇಕಾದ ಪಂಚಾಯಿತಿಯ ಸ್ಪಷ್ಟ ಕರ್ತವ್ಯದ ಉಲ್ಲಂಘನೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಲಾಯಿತು. ಬಳಿಕ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯತ್ ಇಲಾಖೆಯ ಅಧಿಕಾರಿ ಸತೀಶ್ ಪಾಟೀಲ್ ಅವರು ಘಟಕವನ್ನು ಸ್ಥಳಾಂತರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ, ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಲಾಯಿತು. ಈ ಪ್ರತಿಭಟನೆಯಲ್ಲಿ ವಿದ್ಯಾಶ್ರೀ ಪಡಸಲಗಿ, ಶೃತಿ ಕೋಣೆಗೋಳ, ನೀಲಮ್ಮ ಭಜಂತ್ರಿ, ಸರಸ್ವತಿ ಕುರಿ, ಸುಗಂಧ ಕೋಣೆಗೋಳ, ತಾಯಮ್ಮ ಡಂಗ, ರೇಶ್ಮಾ ಕೋಣೆಗೋಳ, ಕಸ್ತೂರೆಮ್ಮ ಡಂಗ, ಮಡೇಮ್ಮ ಸಿಂಗೆಗೋಳ, ಪರಶುರಾಮ ಚೌಡಕಿ, ಸುರೇಶ್ ಡಂಗ, ರೇವಣಸಿದ್ದ ಕಾಂಬಳೆ, ಅನಿಲ ಚೌಡಕಿ, ಕಾಳಪ್ಪ ಮಲ್ಲಗೋಳ, ದ್ಯಾಮಪ್ಪ ಪಡಸಲಗಿ, ಅನಿಲ ಸಿಂಗೆಗೋಳ, ವಿರಾಜ ಪಡಸಲಗಿ, ರಾಮು ಡಂಗ, ಅರ್ಜುನ್ ಡಂಗ, ಶ್ರೀನಿವಾಸ ಶಂಭು ಕೋಣೆಗೋಳ, ರಮೇಶ್ ಕಾಂಬಳೆ, ಪ್ರಕಾಶ್ ಬರಡ್ಡಿ ಸೇರಿದಂತೆ ದಲಿತ ಸಂಘರ್ಷ ಸಮಿತಿಯ ಮುಖಂಡರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಕೂಡಲೇ ಕಾಮಗಾರಿ ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ರೂಪಿಸುವುದಾಗಿ ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಎಚ್ಚರಿಸಿದರು.

ಕಾಮೆಂಟ್‌ಗಳು (0)

ಕಾಮೆಂಟ್ ಮಾಡಲು ಲಾಗಿನ್ ಮಾಡಿ.

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ!