ದೇಹಲಿಯ ಜಂತರ ಮಂತರನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಲಾಠಿ ಚಾರ್ಜ್ ಖಂಡನೀಯ
ಶಿಕ್ಷಣ ಉಳಿಸಿ, ವಿದ್ಯಾರ್ಥಿಗಳ ಭವಿಷ್ಯ ಉಳಿಸಿ" ಎಂಬುದು ಇಂದು ದೇಶದ ಕೋಟ್ಯಂತರ ವಿದ್ಯಾರ್ಥಿಗಳು ಮತ್ತು ಪೋಷಕರ ಒಕ್ಕೊರಲಿನ ಆಗ್ರಹವಾಗಿದೆ"
ನ
ನಮಸ್ತೆ ಕರ್ನಾಟಕ ಡೆಸ್ಕ್
17 ಗಂಟೆಗಳ ಹಿಂದೆ · 57 views

ದೇಹಲಿಯ ಜಂತರ ಮಂತರನಲ್ಲಿ ತಮ್ಮ ಭವಿಷ್ಯ ಹಾಗೂ ಶಿಕ್ಷಣದ ಹಕ್ಕನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಮತ್ತು ಯುವಜನರ ಮೇಲೆ ನಡೆದ ಪೊಲೀಸ್ ಲಾಠಿ ಚಾರ್ಜ್‌ನ್ನು ಆಮ್ ಆದ್ಮಿ ಪಕ್ಷದ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, "ದೇಶದ ಶಿಕ್ಷಣ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿರುವ NEET–NTA ಅವ್ಯವಸ್ಥೆ, ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ನಿರ್ವಹಣೆಯ ವೈಫಲ್ಯಗಳು ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮೇಲಿನ ಸಾರ್ವಜನಿಕರ ವಿಶ್ವಾಸದ ಕುಸಿತದ ಬಗ್ಗೆ ಧ್ವನಿ ಎತ್ತಿದ ವಿದ್ಯಾರ್ಥಿಗಳಿಗೆ ಉತ್ತರವಾಗಿ ಕೇಂದ್ರ ಸರ್ಕಾರ ಬಲಪ್ರಯೋಗ ಮತ್ತು ದಮನದ ರಾಜಕಾರಣವನ್ನು ಪ್ರದರ್ಶಿಸುತ್ತಿದೆ" ಎಂದು ಆರೋಪಿಸಿದರು.
"ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು ಅವರ ಮೇಲೆ ಲಾಠಿ ಚಾರ್ಜ್ ನಡೆಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಯುವಜನರಿಗೆ, ತಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಶಾಂತಿಯುತವಾಗಿ ಮಂಡಿಸುವ ಹಕ್ಕಿದೆ. ಆ ಹಕ್ಕನ್ನು ಬಲಪ್ರಯೋಗದ ಮೂಲಕ ಹತ್ತಿಕ್ಕುವ ಯಾವುದೇ ಪ್ರಯತ್ನವೂ ಖಂಡನೀಯ" ಎಂದು ಅವರು ಹೇಳಿದರು.
ಭೋಗೇಶ್ ಸೋಲಾಪುರ್ ಅವರು, "ಒಂದರ ಹಿಂದೆ ಒಂದರಂತೆ ಹೊರಬಂದಿರುವ NEET ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ನಿರ್ವಹಣೆಯ ವೈಫಲ್ಯಗಳು ಹಾಗೂ NTA ಮೇಲಿನ ವಿಶ್ವಾಸದ ಸಂಕಷ್ಟದ ನಡುವೆಯೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೈತಿಕ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳದೆ ಅಧಿಕಾರದಲ್ಲಿ ಮುಂದುವರಿಯುತ್ತಿರುವುದು ಸಮರ್ಥನೀಯವಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರು ಸಚಿವ ಸ್ಥಾನದಲ್ಲಿ ಮುಂದುವರಿಯಲು ಯಾವುದೇ ನೈತಿಕ ಹಕ್ಕಿಲ್ಲ, ಆದ್ದರಿಂದ ಅವರು ಕೂಡಲೇ ರಾಜೀನಾಮೆ ನೀಡಬೇಕು" ಎಂದು ಆಗ್ರಹಿಸಿದರು.
"ಪ್ರತಿಭಟನೆಯ ವೇಳೆ ಪೊಲೀಸರ ಸಮ್ಮುಖದಲ್ಲೇ ಸಾಮಾನ್ಯ ಉಡುಪಿನಲ್ಲಿದ್ದ ಕೆಲವು ವ್ಯಕ್ತಿಗಳು ಕೋಲುಗಳನ್ನು ಹಿಡಿದು ಸಂಚರಿಸುತ್ತಿರುವುದು ಹಾಗೂ ಪ್ರತಿಭಟನಾಕಾರರೊಂದಿಗೆ ಘರ್ಷಣೆಯಲ್ಲಿ ತೊಡಗಿರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಮತ್ತು ಚಿತ್ರಗಳು ಗಂಭೀರ ಅನುಮಾನಗಳಿಗೆ ಕಾರಣವಾಗಿವೆ. ಅವರು ಯಾರು, ಯಾವ ಅಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಹಾಗೂ ಅವರ ಪಾತ್ರವೇನು ಎಂಬುದರ ಕುರಿತು ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರು ದೇಶದ ಜನತೆಗೆ ಸ್ಪಷ್ಟನೆ ನೀಡಬೇಕು. ಈ ಕುರಿತು ಸ್ವತಂತ್ರ, ನಿಷ್ಪಕ್ಷಪಾತ ಹಾಗೂ ಪಾರದರ್ಶಕ ತನಿಖೆ ನಡೆಸಿ ಸತ್ಯಾಂಶವನ್ನು ಸಾರ್ವಜನಿಕರ ಮುಂದಿಡಬೇಕು" ಎಂದು ಅವರು ಒತ್ತಾಯಿಸಿದರು.
"ಸರ್ಕಾರವು ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗ ನಡೆಸುವ ಬದಲು ಅವರ ಬೇಡಿಕೆಗಳನ್ನು ಆಲಿಸಿ, ಸಂವಾದದ ಮೂಲಕ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗವನ್ನು ಅನುಸರಿಸಬೇಕು. ಇತಿಹಾಸವು ಯುವಜನರ ಧ್ವನಿಯನ್ನು ಬಲಪ್ರಯೋಗದಿಂದ ಶಾಶ್ವತವಾಗಿ ಹತ್ತಿಕ್ಕಲು ಸಾಧ್ಯವಿಲ್ಲ ಎಂಬುದನ್ನು ಅನೇಕ ಬಾರಿ ಸಾಬೀತುಪಡಿಸಿದೆ" ಎಂದು ಅವರು ಹೇಳಿದರು.
"ಶಿಕ್ಷಣವು ದೇಶದ ಭವಿಷ್ಯದ ಅಡಿಪಾಯವಾಗಿದೆ. ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಬದಲು ಅದನ್ನು ದುರ್ಬಲಗೊಳಿಸಿದವರನ್ನು ಅಧಿಕಾರದಲ್ಲಿ ಉಳಿಸುವುದು ದೇಶದ ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಮಾಡುವ ದೊಡ್ಡ ಅನ್ಯಾಯವಾಗಿದೆ. ದೇಶಾದ್ಯಂತ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ಜಾಗೃತ ನಾಗರಿಕರು ಶಿಕ್ಷಣ ಕ್ಷೇತ್ರದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ವಿಶ್ವಾಸಾರ್ಹ ವ್ಯವಸ್ಥೆಯನ್ನು ಆಗ್ರಹಿಸುತ್ತಿದ್ದಾರೆ" ಎಂದು ಅವರು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷವು ಕೇಳಿಕೊಳ್ಳುವುದೇನೆಂದರೆ
1. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜೀನಾಮೆ ನೀಡಬೇಕು.
2. NEET ಮತ್ತು NTAಗೆ ಸಂಬಂಧಿಸಿದ ಎಲ್ಲಾ ಅಕ್ರಮಗಳ ಕುರಿತು ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆ ನಡೆಸಬೇಕು.
3. NTA ರದ್ದು ಮಾಡಬೇಕು.
4. ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿ ಚಾರ್ಜ್‌ಗೆ ಹೊಣೆಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
5. ಪ್ರತಿಭಟನೆಯ ವೇಳೆ ಸಾಮಾನ್ಯ ಉಡುಪಿನಲ್ಲಿ ಕಾರ್ಯನಿರ್ವಹಿಸಿದ ವ್ಯಕ್ತಿಗಳ ಗುರುತು, ಅಧಿಕಾರ ಮತ್ತು ಪಾತ್ರವನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು.
6. ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ವಿದ್ಯಾರ್ಥಿ ಹಿತಾಸಕ್ತಿಗೆ ಆದ್ಯತೆ ನೀಡುವ ಸಮಗ್ರ ಸುಧಾರಣೆಗಳನ್ನು ಜಾರಿಗೆ ತರಬೇಕು.
ಕೊನೆಯಲ್ಲಿ ಭೋಗೇಶ್ ಸೋಲಾಪುರ್ ಅವರು, ಆಮ್ ಆದ್ಮಿ ಪಕ್ಷವು ವಿದ್ಯಾರ್ಥಿಗಳ ಶಾಂತಿಯುತ ಹೋರಾಟಕ್ಕೆ ತನ್ನ ಸಂಪೂರ್ಣ ನೈತಿಕ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದು, ದೇಶದ ಭವಿಷ್ಯವನ್ನು ರಕ್ಷಿಸಲು ಶಿಕ್ಷಣ ವ್ಯವಸ್ಥೆಯಲ್ಲಿ ವಿಶ್ವಾಸ ಮರುಸ್ಥಾಪಿಸುವುದು ಕೇಂದ್ರ ಸರ್ಕಾರದ ಮೊದಲ ಆದ್ಯತೆಯಾಗಬೇಕು ಎಂದು ಹೇಳಿದರು.
"ಶಿಕ್ಷಣ ಉಳಿಸಿ, ವಿದ್ಯಾರ್ಥಿಗಳ ಭವಿಷ್ಯ ಉಳಿಸಿ" ಎಂಬುದು ಇಂದು ದೇಶದ ಕೋಟ್ಯಂತರ ವಿದ್ಯಾರ್ಥಿಗಳು ಮತ್ತು ಪೋಷಕರ ಒಕ್ಕೊರಲಿನ ಆಗ್ರಹವಾಗಿದೆ" ಎಂದು ಅವರು ತಿಳಿಸಿದರು.
ಕಾಮೆಂಟ್‌ಗಳು (0)
ಕಾಮೆಂಟ್ ಮಾಡಲು ಲಾಗಿನ್ ಮಾಡಿ.
ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ!
