ಬ್ರೇಕಿಂಗ್
Ad
GREEN VALLEY INTERNATIONAL SCHOOL
ರಾಜ್ಯ

1.52 ಲಕ್ಷ ‘ಸ್ಥಳಾಂತರಿತ’, 59 ಸಾವಿರಕ್ಕೂ ಹೆಚ್ಚು ‘ಗೈರು’ – ವಿಜಯಪುರ ನಗರ ಕ್ಷೇತ್ರವೊಂದರಲ್ಲೇ 79,737 ಮತದಾರರು ಹೊರಗುಳಿದಿರುವುದಕ್ಕೆ ಆಕ್ಷೇಪ

ವಿಜಯಪುರ ಜಿಲ್ಲೆಯಲ್ಲಿ SIR ಪರಿಷ್ಕರಣೆಯ ವೇಳೆ ಸುಮಾರು 2.97 ಲಕ್ಷ ಮತದಾರರು ಕರಡು ಪಟ್ಟಿಯಿಂದ ಹೊರಗುಳಿದಿರುವುದು ಆತಂಕಕ್ಕೆ ಕಾರಣವಾಗಿದೆ. ಇವರಲ್ಲಿ 1.52 ಲಕ್ಷಕ್ಕೂ ಹೆಚ್ಚು ಮಂದಿಯನ್ನು ‘ಸ್ಥಳಾಂತರಿತ’, 59 ಸಾವಿರಕ್ಕೂ ಹೆಚ್ಚು ಮಂದಿಯನ್ನು ‘ಗೈರು’ ಹಾಗೂ 30 ಸಾವಿರಕ್ಕೂ ಹೆಚ್ಚು ಮಂದಿಯನ್ನು ‘ಡುಪ್ಲಿಕೇಟ್’ ಎಂದು ಗುರುತಿಸಲಾಗಿದೆ. ವಿಜಯಪುರ ನಗರ ಕ್ಷೇತ್ರವೊಂದರಲ್ಲೇ 79,737 ಮತದಾರರು ಹೊರಗುಳಿದಿದ್ದಾರೆ. ಅರ್ಹ ಮತದಾರರ ಹೆಸರುಗಳನ್ನು ಸಮರ್ಪಕ ಪರಿಶೀಲನೆ ಮತ್ತು ಅವಕಾಶವಿಲ್ಲದೆ ಕೈಬಿಡಬಾರದು, ‘Absent’, ‘Shifted’ ಹಾಗೂ ‘Logical Discrepancy’ ಪ್ರಕರಣಗಳಿಗೆ ಸ್ಪಷ್ಟತೆ ನೀಡಬೇಕು ಮತ್ತು ಕ್ಷೇತ್ರವಾರು ಅಂಕಿಅಂಶಗಳನ್ನು ಸಾರ್ವಜನಿಕಗೊಳಿಸಬೇಕು ಎಂದು ಮತ ಕಾವಲು ಸಮಿತಿ ಆಗ್ರಹಿಸಿದೆ.

ನಮಸ್ತೆ ಕರ್ನಾಟಕ ಡೆಸ್ಕ್
15 ನಿಮಿಷಗಳ ಹಿಂದೆ · 6 views
ವಿಜಯಪುರ:ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (Special Intensive Revision–SIR) ಪ್ರಕ್ರಿಯೆಯ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಸಂಭವಿಸಿರುವ ಭಾರೀ ಬದಲಾವಣೆಗಳ ಕುರಿತು ಜಿಲ್ಲೆಯ SIR ಹೋರಾಟ ಸಮಿತಿ ಹಾಗೂ ಮತ ಕಾವಲು ಸಮಿತಿ ತೀವ್ರ ಆತಂಕ ವ್ಯಕ್ತಪಡಿಸಿದೆ. ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದು ಅಗತ್ಯವಾದರೂ, ಈ ಪ್ರಕ್ರಿಯೆಯಲ್ಲಿ ಒಬ್ಬನೇ ಒಬ್ಬ ಅರ್ಹ ಮತದಾರನ ಮತದಾನದ ಹಕ್ಕು ಕಳೆದುಹೋಗದಂತೆ ಚುನಾವಣಾ ಆಯೋಗ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಮಿತಿ ಆಗ್ರಹಿಸಿದೆ. ವಿಜಯಪುರ ಜಿಲ್ಲೆಯಲ್ಲಿ SIR ಪ್ರಕ್ರಿಯೆಯ ಮೊದಲ ಹಂತದಲ್ಲಿ ಒಟ್ಟು 19,82,114 ಮತದಾರರಿಗೆ ಎನ್ಯೂಮರೇಷನ್ ಫಾರಂಗಳನ್ನು ವಿತರಿಸಲಾಗಿತ್ತು. ಈ ಪೈಕಿ 16,84,968 ಫಾರಂಗಳು ಡಿಜಿಟಲೀಕರಣಗೊಂಡಿದ್ದು, 2,97,147 ಮತದಾರರು ವಿವಿಧ ಕಾರಣಗಳಿಂದ ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದು ಲಭ್ಯವಿರುವ ಅಂಕಿಅಂಶಗಳು ಸೂಚಿಸುತ್ತವೆ. ಹೊರಗುಳಿದವರಲ್ಲಿ 1,52,169 ಮಂದಿ ‘ಶಾಶ್ವತವಾಗಿ ಸ್ಥಳಾಂತರಗೊಂಡವರು’, 59,093 ಮಂದಿ ‘ಗೈರು’ ಹಾಗೂ 30,692 ಮಂದಿ ‘ಡುಪ್ಲಿಕೇಟ್’*ಯ ಎಂದು ಗುರುತಿಸಲಾಗಿದೆ. ವಿಜಯಪುರ ನಗರ ಕ್ಷೇತ್ರದಲ್ಲಿ 79,737 ಮತದಾರರು ಹೊರಗೆ ಕ್ಷೇತ್ರವಾರು ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು 79,737 ಮತದಾರರು ವಿವಿಧ ಕಾರಣಗಳಿಂದ ಕರಡು ಪಟ್ಟಿಯಿಂದ ಹೊರಗುಳಿದಿದ್ದಾರೆ. ನಂತರ ನಾಗಠಾಣ ಕ್ಷೇತ್ರದಲ್ಲಿ 40,526 ಹಾಗೂ ಮುದ್ದೇಬಿಹಾಳ ಕ್ಷೇತ್ರದಲ್ಲಿ 35,990 ಮತದಾರರು ಹೊರಗುಳಿದಿದ್ದಾರೆ. ವಿಜಯಪುರ ನಗರ ಕ್ಷೇತ್ರದಲ್ಲೇ 24,693 ಮಂದಿಯನ್ನು ಸ್ಥಳಾಂತರಗೊಂಡವರು ಹಾಗೂ 38,520 ಮಂದಿಯನ್ನು ಗೈರು‌ ಎಂದು ಗುರುತಿಸಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ‘ಸ್ಥಳಾಂತರ’ ಎಂದರೆ ಮತದಾನದ ಹಕ್ಕು ಕಳೆದುಕೊಳ್ಳುವುದೇ? ಉದ್ಯೋಗ, ಶಿಕ್ಷಣ, ವ್ಯಾಪಾರ, ಕುಟುಂಬದ ಕಾರಣಗಳು ಅಥವಾ ಉತ್ತಮ ಜೀವನೋಪಾಯಕ್ಕಾಗಿ ವಿಜಯಪುರ ಜಿಲ್ಲೆಯ ಅನೇಕರು ಬೆಂಗಳೂರು, ಮಹಾರಾಷ್ಟ್ರ, ಗೋವಾ, ಕೇರಳ ಸೇರಿದಂತೆ ವಿವಿಧ ರಾಜ್ಯಗಳು ಹಾಗೂ ನಗರಗಳಿಗೆ ತೆರಳುವುದು ಸಾಮಾನ್ಯವಾಗಿದೆ. ಹೀಗಾಗಿ ಒಬ್ಬ ಮತದಾರ ತಾತ್ಕಾಲಿಕವಾಗಿ ಬೇರೆಡೆ ವಾಸಿಸುತ್ತಿರುವುದನ್ನು ಆಧರಿಸಿ ಅವರ ಮತದಾನದ ಹಕ್ಕಿಗೆ ಧಕ್ಕೆ ಬರಬಾರದು. ಹೊಸ ಸ್ಥಳದಲ್ಲಿ ಮತದಾರರಾಗಿ ನೋಂದಾಯಿಸಿಕೊಳ್ಳಲು ಅಥವಾ ಮತ ವರ್ಗಾವಣೆ ಮಾಡಿಕೊಳ್ಳಲು ಸರಳ ವ್ಯವಸ್ಥೆ ಕಲ್ಪಿಸಬೇಕು ಎಂದು ಸಮಿತಿ ಒತ್ತಾಯಿಸಿದೆ. ಹಳೆಯ ಸ್ಥಳದಿಂದ ಹೆಸರು ತೆಗೆದುಹಾಕಲಾಗಿದ್ದು, ಹೊಸ ಸ್ಥಳದಲ್ಲಿ ಹೆಸರು ಸೇರ್ಪಡೆಯಾಗದಿದ್ದರೆ, ಅರ್ಹ ನಾಗರಿಕರು ಎರಡೂ ಕಡೆ ಮತದಾರರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂಬ ಆತಂಕವನ್ನು ಸಮಿತಿ ವ್ಯಕ್ತಪಡಿಸಿದೆ. ‘Absent’ ಎಂದು ಗುರುತಿಸಿದವರಿಗೂ ಅವಕಾಶ ನೀಡಬೇಕು SIR ಪ್ರಕ್ರಿಯೆಯಲ್ಲಿ ಒಬ್ಬ ವ್ಯಕ್ತಿ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಲಭ್ಯವಿರಲಿಲ್ಲ ಎಂಬ ಕಾರಣಕ್ಕೆ ಅವರನ್ನು ಅನರ್ಹ ಮತದಾರರೆಂದು ಪರಿಗಣಿಸುವುದು ಸರಿಯಲ್ಲ ಎಂದು ಸಮಿತಿ ಹೇಳಿದೆ. ಉದ್ಯೋಗ, ಶಿಕ್ಷಣ, ವ್ಯಾಪಾರ ಅಥವಾ ಇತರೆ ವೈಯಕ್ತಿಕ ಕಾರಣಗಳಿಂದ ಮತದಾರರು ತಮ್ಮ ಸ್ವಗ್ರಾಮದಲ್ಲಿ ಇಲ್ಲದಿರುವ ಸಾಧ್ಯತೆ ಇದೆ. ಆದ್ದರಿಂದ ‘Absent’ ಎಂದು ಗುರುತಿಸಲಾದ ಪ್ರತಿಯೊಬ್ಬ ಮತದಾರನಿಗೂ ತಮ್ಮ ಹಕ್ಕನ್ನು ಸಮರ್ಥಿಸಿಕೊಳ್ಳಲು ಸಮರ್ಪಕ ಅವಕಾಶ ನೀಡಬೇಕು ಎಂದು ಆಗ್ರಹಿಸಲಾಗಿದೆ. “ಅಂಕಿಅಂಶಗಳ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕು” ಮತ ಕಾವಲು ಸಮಿತಿ ಅಧ್ಯಕ್ಷ ಭೋಗೇಶ್ ಸೋಲಾಪುರ್ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಸುಮಾರು 2.97 ಲಕ್ಷ ಮತದಾರರು ಕರಡು ಪಟ್ಟಿಯಿಂದ ಹೊರಗುಳಿದಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಹೇಳಿದರು. “1.52 ಲಕ್ಷಕ್ಕೂ ಹೆಚ್ಚು ಮತದಾರರನ್ನು ‘ಸ್ಥಳಾಂತರಗೊಂಡವರು’ ಹಾಗೂ 59 ಸಾವಿರಕ್ಕೂ ಹೆಚ್ಚು ಜನರನ್ನು ‘ಗೈರು’ ಎಂದು ಗುರುತಿಸಲಾಗಿದೆ. ಉದ್ಯೋಗ, ಶಿಕ್ಷಣ, ವ್ಯಾಪಾರ ಅಥವಾ ಇತರೆ ಕಾರಣಗಳಿಂದ ತಾತ್ಕಾಲಿಕವಾಗಿ ಬೇರೆಡೆ ವಾಸಿಸುವುದು ಯಾವುದೇ ನಾಗರಿಕನ ಮತದಾನದ ಹಕ್ಕು ಕಸಿಯಲು ಕಾರಣವಾಗಬಾರದು. ವಿಶೇಷವಾಗಿ ವಿಜಯಪುರ ನಗರ ಕ್ಷೇತ್ರದಲ್ಲಿ 79,737 ಮತದಾರರು ಹೊರಗುಳಿದಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಸಂಪೂರ್ಣ ಪಾರದರ್ಶಕತೆ ಹಾಗೂ ಸ್ಪಷ್ಟತೆ ನೀಡಬೇಕು. ಅರ್ಹ ಮತದಾರರ ಹೆಸರುಗಳನ್ನು ವೈಯಕ್ತಿಕ ಪರಿಶೀಲನೆ ಮತ್ತು ಸಮರ್ಪಕ ಅವಕಾಶವಿಲ್ಲದೆ ಕೈಬಿಡಬಾರದು. ಈ ಕುರಿತು ಕಾನೂನುಬದ್ಧ ಹಾಗೂ ಪ್ರಜಾಸತ್ತಾತ್ಮಕ ಹೋರಾಟ ಮುಂದುವರಿಸಲಾಗುವುದು” ಎಂದು ಹೇಳಿದರು. ಮೊಹಮ್ಮದ್ ಖದೀರ್ ಮಾತನಾಡಿ, SIR ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿ ನಡೆಯಬೇಕು. ‘Absent’ ಮತ್ತು ‘Shifted’ ಎಂದು ಗುರುತಿಸಲಾದ ಮತದಾರರಿಗೆ ತಮ್ಮ ಹಕ್ಕನ್ನು ಸಮರ್ಥಿಸಿಕೊಳ್ಳಲು ಸಾಕಷ್ಟು ಅವಕಾಶ ನೀಡಬೇಕು. ಚುನಾವಣಾ ಆಯೋಗವು ಕ್ಷೇತ್ರವಾರು ಸಂಪೂರ್ಣ ಅಂಕಿಅಂಶಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿ ಗೊಂದಲ ನಿವಾರಿಸಬೇಕು ಎಂದು ಆಗ್ರಹಿಸಿದರು. ಲಕ್ಷ್ಮಣ್ ಹಂದ್ರಾಳ್ ಮಾತನಾಡಿ, ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಯುವಕರು ಹಾಗೂ ಕುಟುಂಬಗಳು ಬೇರೆ ನಗರಗಳಿಗೆ ತೆರಳುವುದು ಸಹಜ. ಅವರನ್ನು ‘Shifted’ ಎಂದು ಗುರುತಿಸಿ ಮತದಾರರ ಪಟ್ಟಿಯಿಂದ ಹೊರಗಿಡುವ ಬದಲು, ಮತದಾರರ ಹಕ್ಕು ಸುರಕ್ಷಿತವಾಗಿರುವಂತೆ ವರ್ಗಾವಣೆ ಮತ್ತು ಮರುನೋಂದಣಿಗೆ ಸರಳ ವ್ಯವಸ್ಥೆ ಕಲ್ಪಿಸಬೇಕು. ಆಡಳಿತಾತ್ಮಕ ಅಥವಾ ತಾಂತ್ರಿಕ ದೋಷದ ಹೊಣೆಯನ್ನು ಸಾಮಾನ್ಯ ಮತದಾರರ ಮೇಲೆ ಹೊರಿಸುವುದು ಸರಿಯಲ್ಲ ಎಂದರು. ಡಾ. ಗುರಿಕರ್ ಮಾತನಾಡಿ, SIR ಪ್ರಕ್ರಿಯೆಯಲ್ಲಿ ಕಂಡುಬರುವ ‘Logical Discrepancy’ ಸೇರಿದಂತೆ ಯಾವುದೇ ಡೇಟಾ ಅಥವಾ ತಾಂತ್ರಿಕ ವ್ಯತ್ಯಾಸವನ್ನು ಮತದಾರನ ಅನರ್ಹತೆಯ ಅಂತಿಮ ಸಾಕ್ಷಿಯಾಗಿ ಪರಿಗಣಿಸಬಾರದು. ಪ್ರತಿಯೊಂದು ಪ್ರಕರಣವನ್ನೂ ಮಾನವೀಯವಾಗಿ ಪರಿಶೀಲಿಸಿ, ಸಂಬಂಧಪಟ್ಟ ಮತದಾರರಿಗೆ ದಾಖಲೆಗಳನ್ನು ಸಲ್ಲಿಸಲು ಹಾಗೂ ತಮ್ಮ ಹಕ್ಕನ್ನು ಸಮರ್ಥಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಹೇಳಿದರು. ಮತ ಕಾವಲು ಸಮಿತಿಯ ಪ್ರಮುಖ ಬೇಡಿಕೆಗಳು 1. SIR ಪ್ರಕ್ರಿಯೆಯಲ್ಲಿ ತಪ್ಪಾಗಿ ಹೊರಗುಳಿದಿರುವ ಎಲ್ಲ ಅರ್ಹ ಮತದಾರರ ಹೆಸರುಗಳನ್ನು ಮರುಪರಿಶೀಲಿಸಬೇಕು. 2. ‘Absent’ ಎಂದು ಗುರುತಿಸಲಾದ ಪ್ರತಿಯೊಬ್ಬ ಮತದಾರನಿಗೂ ತಮ್ಮ ಹಕ್ಕನ್ನು ಸಮರ್ಥಿಸಿಕೊಳ್ಳಲು ಅವಕಾಶ ನೀಡಬೇಕು. 3. ‘Shifted’ ಎಂದು ಗುರುತಿಸಲಾದ ಮತದಾರರಿಗೆ ಹೊಸ ವಿಳಾಸಕ್ಕೆ ಮತ ವರ್ಗಾಯಿಸಿಕೊಳ್ಳಲು ಸರಳ ಹಾಗೂ ತ್ವರಿತ ವ್ಯವಸ್ಥೆ ಕಲ್ಪಿಸಬೇಕು. 4. ವೈಯಕ್ತಿಕ ಪರಿಶೀಲನೆ ಮತ್ತು ಸಮರ್ಪಕ ಅವಕಾಶವಿಲ್ಲದೆ ಯಾವುದೇ ಅರ್ಹ ಮತದಾರನ ಹೆಸರನ್ನು ಅಂತಿಮವಾಗಿ ಕೈಬಿಡಬಾರದು. 5. ‘Logical Discrepancy’ ಎಂದು ಗುರುತಿಸಿರುವ ಮತದಾರರಿಗೆ ಅದರ ಕಾರಣವನ್ನು ಸ್ಪಷ್ಟವಾಗಿ ತಿಳಿಸಬೇಕು. 6. SIR ಕುರಿತು BLOಗಳು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮತ್ತು ಮಾರ್ಗದರ್ಶನ ನೀಡಬೇಕು. 7. ವಿಜಯಪುರ ಜಿಲ್ಲೆಯ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಮತದಾರರ ಸಹಾಯ ಕೇಂದ್ರಗಳನ್ನು ನಡೆಸಬೇಕು. 8. ಕರಡು ಪಟ್ಟಿಯಲ್ಲಿನ ಆಕ್ಷೇಪಣೆಗಳನ್ನು ಪಕ್ಷಪಾತವಿಲ್ಲದೆ ಪರಿಶೀಲಿಸಿ ಅರ್ಹ ಮತದಾರರ ಹೆಸರುಗಳನ್ನು ಮರುಸ್ಥಾಪಿಸಬೇಕು. 9. SIR ಪ್ರಕ್ರಿಯೆಯ ಪ್ರತಿಯೊಂದು ಹಂತದ ಅಂಕಿಅಂಶಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿ ಸಂಪೂರ್ಣ ಪಾರದರ್ಶಕತೆ ಕಾಪಾಡಬೇಕು. “ಅನರ್ಹರನ್ನು ಗುರುತಿಸಿ – ಅರ್ಹರನ್ನು ಅಳಿಸಬೇಡಿ” ಮತ ಕಾವಲು ಸಮಿತಿ ಯಾವುದೇ BLO, ಚುನಾವಣಾಧಿಕಾರಿ ಅಥವಾ ವೈಯಕ್ತಿಕ ಅಧಿಕಾರಿಯ ವಿರುದ್ಧ ಹೋರಾಟ ನಡೆಸುತ್ತಿಲ್ಲ. ಬದಲಾಗಿ, ವ್ಯವಸ್ಥೆಯ ಪಾರದರ್ಶಕತೆ, ಪ್ರಕ್ರಿಯೆಯ ನ್ಯಾಯಸಮ್ಮತತೆ ಹಾಗೂ ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನದ ಹಕ್ಕಿನ ರಕ್ಷಣೆಯ ಪರವಾಗಿ ಹೋರಾಟ ನಡೆಸುತ್ತಿದೆ ಎಂದು ಸಮಿತಿ ಸ್ಪಷ್ಟಪಡಿಸಿದೆ. “ಅನರ್ಹರನ್ನು ಗುರುತಿಸಿ – ಅರ್ಹರನ್ನು ಅಳಿಸಬೇಡಿ. ಮತದಾರರ ಪಟ್ಟಿ ಶುದ್ಧೀಕರಣದ ಹೆಸರಿನಲ್ಲಿ ಮತದಾನದ ಹಕ್ಕು ಕಸಿಯಬೇಡಿ” ಎಂಬುದು ಸಮಿತಿಯ ಪ್ರಮುಖ ಆಗ್ರಹವಾಗಿದೆ. ವಿಜಯಪುರ ಜಿಲ್ಲೆಯ ಸುಮಾರು 2.97 ಲಕ್ಷ ಮತದಾರರು ಏಕೆ ಕರಡು ಪಟ್ಟಿಯಿಂದ ಹೊರಗುಳಿದಿದ್ದಾರೆ? ಎಂಬುದಕ್ಕೆ ಕ್ಷೇತ್ರವಾರು ಹಾಗೂ ಮತದಾರರ ವರ್ಗವಾರು ಸಂಪೂರ್ಣ ಸ್ಪಷ್ಟತೆಯನ್ನು ಚುನಾವಣಾ ಆಯೋಗ ನೀಡಬೇಕು. ಅರ್ಹ ಮತದಾರರ ಹಕ್ಕುಗಳನ್ನು ರಕ್ಷಿಸುವವರೆಗೆ ತಮ್ಮ ಪ್ರಜಾಸತ್ತಾತ್ಮಕ ಹಾಗೂ ಕಾನೂನುಬದ್ಧ ಹೋರಾಟ ಮುಂದುವರಿಯಲಿದೆ ಎಂದು ಸಮಿತಿ ತಿಳಿಸಿದೆ. ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಅಕ್ರಮ ಮಾಶಾಲ್ಕರ್, ಫಯಾಜ್ ಕಲಾದಗಿ, ನೀಲಂಬಿಕಾ ಬಿರಾದಾರ್ ಹಾಗೂ ಶ್ರೀನಾಥ್ ಪೂಜಾರಿ ಉಪಸ್ಥಿತರಿದ್ದರು. “ಪ್ರತಿ ಅರ್ಹ ಮತದಾರನ ಹೆಸರು ಮತದಾರರ ಪಟ್ಟಿಯಲ್ಲಿ ಇರಬೇಕು. ಪ್ರತಿ ಅರ್ಹ ನಾಗರಿಕನ ಮತದಾನದ ಹಕ್ಕು ಉಳಿಯಬೇಕು. ಪ್ರಜಾಪ್ರಭುತ್ವ ಉಳಿಯಬೇಕು – ಮತದಾನದ ಹಕ್ಕು ಉಳಿಯಬೇಕು.”
Ad
ಸಂಪಾದಕರು

ಕಾಮೆಂಟ್‌ಗಳು (0)

ಕಾಮೆಂಟ್ ಮಾಡಲು ಲಾಗಿನ್ ಮಾಡಿ.

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ!