Ad
GREEN VALLEY INTERNATIONAL SCHOOL
ರಾಜ್ಯ

“ಮುದ್ದೇಬಿಹಾಳವನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ; ಇಲ್ಲವಾದರೆ ರೈತರ ಶಾಪ ಸರ್ಕಾರಕ್ಕೆ ತಟ್ಟಲಿದೆ” – ಮಹೇಬೂಬ ಹಡಲಗೇರಿ ಎಚ್ಚರಿಕೆ

ಮಳೆ ಕೊರತೆಯಿಂದ ರೈತರು ಕಂಗಾಲು: ಅವೈಜ್ಞಾನಿಕ ಸಮೀಕ್ಷೆ ಮೂಲಕ ತಾಲೂಕನ್ನು ಬರ ಪಟ್ಟಿಯಿಂದ ಕೈಬಿಟ್ಟಿರುವ ಆರೋಪ ಮುದ್ದೇಬಿಹಾಳ ತಾಲೂಕನ್ನು ತಕ್ಷಣ ಬರಪೀಡಿತ ತಾಲೂಕು ಎಂದು ಘೋಷಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ಇಲ್ಲವಾದರೆ ರೈತರೊಂದಿಗೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಆಮ್ ಆದ್ಮಿ ಪಾರ್ಟಿಯ ಮುದ್ದೇಬಿಹಾಳ ಮತಕ್ಷೇತ್ರದ ಅಧ್ಯಕ್ಷ ಮಹೇಬೂಬ ಹಡಲಗೇರಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸಂಪಾದಕೀಯ
4 ನಿಮಿಷಗಳ ಹಿಂದೆ · 3 views
ಮುದ್ದೇಬಿಹಾಳ ಸೇಪ್ 01: ಮುದ್ದೇಬಿಹಾಳ ತಾಲೂಕಿನಲ್ಲಿ ಬಹುತೇಕ ಪ್ರದೇಶಗಳು ಒಣ ಬೇಸಾಯಕ್ಕೆ ಅವಲಂಬಿತವಾಗಿದ್ದು, ಇಲ್ಲಿನ ರೈತರು ಮುಖ್ಯವಾಗಿ ಮಳೆಯನ್ನೇ ನಂಬಿಕೊಂಡು ಬೆಳೆ ಬೆಳೆಯುತ್ತಿದ್ದಾರೆ. ಆದರೆ ಪ್ರಸಕ್ತ ಸಾಲಿನಲ್ಲಿ ರೈತರು ನಿರೀಕ್ಷಿಸಿದ ಪ್ರಮಾಣದಲ್ಲಿ ಮಳೆಯಾಗದೆ ಮಳೆ ಕೊರತೆಯಿಂದ ಬೆಳೆಗಳು ಹಾನಿಗೊಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಸಾಲ-ಸೂಲ ಮಾಡಿ ಬೀಜ, ಗೊಬ್ಬರ ಹಾಗೂ ಬಿತ್ತನೆಗಾಗಿ ಹಣ ಖರ್ಚು ಮಾಡಿ ಕೃಷಿ ಕೈಗೊಂಡಿದ್ದರು. ಆದರೆ ಸಮಯಕ್ಕೆ ಸರಿಯಾಗಿ ಮಳೆಯಾಗದ ಹಿನ್ನೆಲೆಯಲ್ಲಿ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದ್ದು, ಮಾಡಿದ ಖರ್ಚನ್ನೇ ಮರಳಿ ಪಡೆಯಲು ಸಾಧ್ಯವಾಗದಂತಹ ಆತಂಕಕಾರಿ ಪರಿಸ್ಥಿತಿಯಲ್ಲಿ ರೈತರು ಸಿಲುಕಿದ್ದಾರೆ ಎಂದು ಅವರು ಆರೋಪಿಸಿದರು. ಇಂತಹ ಗಂಭೀರ ಪರಿಸ್ಥಿತಿಯ ನಡುವೆಯೂ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಮುದ್ದೇಬಿಹಾಳ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವುದು ಖಂಡನೀಯ. ಸಮೀಕ್ಷೆಯ ಮಾನದಂಡಗಳು ಹಾಗೂ ವಾಸ್ತವ ಪರಿಸ್ಥಿತಿಯ ನಡುವೆ ವ್ಯತ್ಯಾಸವಿದ್ದು, ಸಮೀಕ್ಷೆಯನ್ನು ಮರುಪರಿಶೀಲಿಸಬೇಕು ಎಂದು ಮಹೇಬೂಬ ಹಡಲಗೇರಿ ಒತ್ತಾಯಿಸಿದರು. “ರೈತರ ಹೊಲಗಳಿಗೆ ತೆರಳಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಬೇಕು. ಕೇವಲ ಕಚೇರಿಯಲ್ಲಿ ಕುಳಿತು ಅಂಕಿ-ಅಂಶಗಳ ಆಧಾರದ ಮೇಲೆ ನಿರ್ಧಾರ ಕೈಗೊಂಡರೆ ರೈತರ ನೋವು ಸರ್ಕಾರಕ್ಕೆ ಅರ್ಥವಾಗುವುದಿಲ್ಲ. ಮಳೆ ಕೊರತೆಯಿಂದ ರೈತರು ಅನುಭವಿಸುತ್ತಿರುವ ಸಂಕಷ್ಟವನ್ನು ಪರಿಗಣಿಸಿ ಮುದ್ದೇಬಿಹಾಳ ತಾಲೂಕನ್ನು ಕೂಡಲೇ ಬರಪೀಡಿತ ತಾಲೂಕು ಎಂದು ಘೋಷಿಸಬೇಕು” ಎಂದು ಅವರು ಆಗ್ರಹಿಸಿದರು. ರೈತರೊಂದಿಗೆ ಬೀದಿಗಿಳಿದು ಹೋರಾಟ ಸರ್ಕಾರ ಇನ್ನೂ ವಿಳಂಬ ಮಾಡದೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರೈತರೊಂದಿಗೆ ಸೇರಿ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಸಿದರು. “ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಮಾಡಲಿ ಎಂದು ನಾವು ಈಗಾಗಲೇ ಸೂಕ್ಷ್ಮವಾಗಿ ಹೇಳಿದ್ದೇವೆ. ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದೆ. ಇನ್ನಾದರೂ ಎಚ್ಚೆತ್ತುಕೊಂಡು ರೈತರ ಪರವಾಗಿ ಧ್ವನಿ ಎತ್ತಬೇಕು” ಎಂದು ಮಹೇಬೂಬ ಹಡಲಗೇರಿ ಹೇಳಿದರು. ರೈತರ ಸಂಕಷ್ಟವನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ರೈತರ ಆಕ್ರೋಶ ಮತ್ತಷ್ಟು ಹೆಚ್ಚಾಗಬಹುದು. ಆದ್ದರಿಂದ ಸರ್ಕಾರ ಕೂಡಲೇ ಮುದ್ದೇಬಿಹಾಳ ತಾಲೂಕಿನ ವಾಸ್ತವ ಕೃಷಿ ಪರಿಸ್ಥಿತಿಯ ಕುರಿತು ಮರುಸಮೀಕ್ಷೆ ನಡೆಸಿ, ಅರ್ಹತೆ ಇದ್ದಲ್ಲಿ ಬರಪೀಡಿತ ತಾಲೂಕು ಎಂದು ಘೋಷಿಸಿ ರೈತರಿಗೆ ಅಗತ್ಯ ಪರಿಹಾರ ಹಾಗೂ ನೆರವು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
Ad
ಸಂಪಾದಕರು

ಕಾಮೆಂಟ್‌ಗಳು (0)

ಕಾಮೆಂಟ್ ಮಾಡಲು ಲಾಗಿನ್ ಮಾಡಿ.

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ!