ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜಿನ DPRಗೆ ಮಂಜೂರಾತಿ: ನೋಂದಣಿ ಪ್ರಕ್ರಿಯೆಯೂ ಪೂರ್ಣ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪ್ರವೇಶ ಪ್ರಕ್ರಿಯೆ ಆರಂಭಿಸಲು ಹೋರಾಟ ಸಮಿತಿ ಆಗ್ರಹ
ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ನಡೆದ 116 ದಿನಗಳ ಪಕ್ಷಾತೀತ ಹಾಗೂ ಜಾತ್ಯತೀತ ಜನಹೋರಾಟಕ್ಕೆ ಇದೀಗ ಮಹತ್ವದ ಫಲ ದೊರೆತಿದೆ. ಕಾಲೇಜಿನ DPR ಸಿದ್ಧಗೊಂಡು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಮಂಜೂರಾತಿ ದೊರೆತಿದೆ. ಅಧಿಕೃತ ನೋಂದಣಿ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಆರಂಭಿಸುವ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣ ಮತ್ತು ಇತರ ಅಗತ್ಯ ಕಾರ್ಯಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕೆಂದು ಹೋರಾಟ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.
ನ
ನಮಸ್ತೆ ಕರ್ನಾಟಕ ಡೆಸ್ಕ್
34 ನಿಮಿಷಗಳ ಹಿಂದೆ · 3 views

ವಿಜಯಪುರ ಆಗಸ್ಟ್ 19 : ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂಬ ಬಹುದಿನಗಳ ಬೇಡಿಕೆಗೆ ಇದೀಗ ಮಹತ್ವದ ಮುನ್ನಡೆ ದೊರೆತಿದೆ. ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿಯ ನಿರಂತರ ಹೋರಾಟದ ಫಲವಾಗಿ ರೂಪುಗೊಂಡಿರುವ ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜಿನ ವಿಸ್ತೃತ ಯೋಜನಾ ವರದಿ (DPR) ಸಿದ್ಧಗೊಂಡು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಅದಕ್ಕೆ ಮಂಜೂರಾತಿಯೂ ದೊರೆತಿದೆ. ಅಲ್ಲದೆ, ಕಾಲೇಜಿನ ಅಧಿಕೃತ ನೋಂದಣಿ ಪ್ರಕ್ರಿಯೆಯೂ ಪೂರ್ಣಗೊಂಡಿದೆ ಎಂದು ವಿಶೇಷ ಅಧಿಕಾರಿಗಳಾದ ಡಾ. ಜಾನಕಿ ತೊರವಿ ಅವರು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕೆಂದು ಒತ್ತಾಯಿಸಿ ನಡೆದ ಹೋರಾಟವು ಜಿಲ್ಲೆಯ ಇತಿಹಾಸದಲ್ಲೇ ಪ್ರಮುಖ ಜನಹೋರಾಟವಾಗಿ ಗುರುತಿಸಿಕೊಂಡಿದೆ. ಸುಮಾರು 116 ದಿನಗಳ ಕಾಲ ನಡೆದ ಈ ಹೋರಾಟವು ಪಕ್ಷಾತೀತ ಹಾಗೂ ಜಾತ್ಯತೀತವಾಗಿ ನಡೆದ ವಿಶಿಷ್ಟ ಹೋರಾಟವಾಗಿತ್ತು. ಜಿಲ್ಲೆಯ ಸಮಸ್ತ ಜನತೆ, ಪ್ರಗತಿಪರ ಸಂಘಟನೆಗಳು, ಮಹಿಳಾ ಸಂಘಟನೆಗಳು, ವಿಕಲಚೇತನರ ಸಂಘಟನೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ಬಹುತೇಕ ಎಲ್ಲ ಜನಪ್ರತಿನಿಧಿಗಳು ಈ ಹೋರಾಟಕ್ಕೆ ಬೆಂಬಲ ನೀಡಿದ್ದರು.
ಹೋರಾಟದ ಸಂದರ್ಭದಲ್ಲಿ ಜನವರಿ 1ರಂದು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ 27 ಹೋರಾಟಗಾರರ ಮೇಲೆ ರಾಜ್ಯ ಸರ್ಕಾರ ಸುಳ್ಳು ಮೊಕದ್ದಮೆ ದಾಖಲಿಸಿತ್ತು. ಈ ಪೈಕಿ 6 ಹೋರಾಟಗಾರರನ್ನು 14 ದಿನಗಳ ಕಾಲ ಜೈಲಿಗಟ್ಟಲಾಗಿತ್ತು. ಇದರಿಂದ ಹೋರಾಟ ಮತ್ತಷ್ಟು ತೀವ್ರಗೊಂಡ ಹಿನ್ನೆಲೆಯಲ್ಲಿ, ಜನವರಿ 9ರಂದು ವಿಜಯಪುರಕ್ಕೆ ಆಗಮಿಸಿದ್ದ ಅಂದಿನ ಮುಖ್ಯಮಂತ್ರಿಗಳು ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಘೋಷಿಸಿದ್ದರು.
ನಂತರ 2026-27ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಸಂದರ್ಭದಲ್ಲಿ ಅರ್ಥ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ವಿಸ್ತೃತ ಯೋಜನಾ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಘೋಷಿಸಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಂ.ಬಿ. ಪಾಟೀಲ ಅವರು ಕೂಡ ರಾಜ್ಯ ಸರ್ಕಾರವು ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಿಯೇ ತೀರುತ್ತದೆ ಎಂಬ ಭರವಸೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿಯ ಸದಸ್ಯರು ಇಂದು ಹೊಸದಾಗಿ ವಿಶೇಷ ಅಧಿಕಾರಿಗಳಾಗಿ ನೇಮಕಗೊಂಡಿರುವ ಡಾ. ಜಾನಕಿ ತೊರವಿ ಅವರನ್ನು ಭೇಟಿ ಮಾಡಿ, ಕಾಲೇಜು ಸ್ಥಾಪನೆಯ ಪ್ರಸ್ತುತ ಸ್ಥಿತಿ, DPR ಹಾಗೂ ಮುಂದಿನ ಆಡಳಿತಾತ್ಮಕ ಪ್ರಕ್ರಿಯೆಗಳ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಅಧಿಕಾರಿಗಳಿಂದ ದೊರೆತ ಮಾಹಿತಿಯಂತೆ, ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜಿನ DPR ಸಂಪೂರ್ಣವಾಗಿ ಸಿದ್ಧಗೊಂಡು ಸರ್ಕಾರಕ್ಕೆ ಸಲ್ಲಿಕೆಯಾಗಿದೆ ಮತ್ತು ಅದಕ್ಕೆ ಅಗತ್ಯ ಮಂಜೂರಾತಿ ದೊರೆತಿದೆ. ಜೊತೆಗೆ ಕಾಲೇಜಿನ ಅಧಿಕೃತ ನೋಂದಣಿ ಪ್ರಕ್ರಿಯೆಯೂ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಬೆಳವಣಿಗೆ ವಿಜಯಪುರ ಜಿಲ್ಲೆಯ ಜನರಿಗೆ ಹಾಗೂ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಹೋರಾಟಗಾರರಿಗೆ ಮಹತ್ವದ ಸಂತಸದ ಸುದ್ದಿಯಾಗಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪ್ರವೇಶಕ್ಕೆ ಆಗ್ರಹ
ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟ ಸಮಿತಿಯ ಹಿರಿಯ ಸದಸ್ಯರಾದ ಡಾ. ಬಿ. ಭಗವಾನ್ ರೆಡ್ಡಿ ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಆದಷ್ಟು ಬೇಗ ನಿರ್ಮಾಣಗೊಳ್ಳಬೇಕು ಎಂದು ಒತ್ತಾಯಿಸಿದರು.
“ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಆದಷ್ಟು ಬೇಗ ನಿರ್ಮಾಣಗೊಳ್ಳಬೇಕು. ಮುಂಬರುವ ಶೈಕ್ಷಣಿಕ ವರ್ಷದಲ್ಲೇ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಆರಂಭವಾಗುವಂತೆ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಹಂತದಲ್ಲಿನ ಎಲ್ಲಾ ಕಾರ್ಯಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಈ ಮೂಲಕ ವಿಜಯಪುರ ಜಿಲ್ಲೆಯ ಜನರ ಹಾಗೂ ಹೋರಾಟಗಾರರ ಬಹುದಿನಗಳ ಆಸೆಯನ್ನು ಆದಷ್ಟು ಬೇಗ ಈಡೇರಿಸಬೇಕು” ಎಂದು ಅವರು ಆಗ್ರಹಿಸಿದರು.
ಅರ್ಧ ಶತಮಾನದ ಕನಸಿಗೆ ಸಾಕಾರ ರೂಪ
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು ಎಂಬುದು ಜಿಲ್ಲೆಯ ಜನರ ಅರ್ಧ ಶತಮಾನಕ್ಕೂ ಮೀರಿದ ಕನಸಾಗಿದೆ. ಇದೀಗ DPRಗೆ ಮಂಜೂರಾತಿ ದೊರೆತಿರುವುದು ಹಾಗೂ ಕಾಲೇಜಿನ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿರುವುದು ಈ ದೀರ್ಘಕಾಲದ ಕನಸು ನನಸಾಗುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಮುಂದಿನ ಹಂತದಲ್ಲಿ ಕಾಲೇಜಿಗೆ ಅಗತ್ಯವಿರುವ ಆಡಳಿತಾತ್ಮಕ ಪ್ರಕ್ರಿಯೆಗಳು, ಸ್ಥಳ, ಮೂಲಸೌಕರ್ಯ, ಕಟ್ಟಡ ನಿರ್ಮಾಣ ಸೇರಿದಂತೆ ಎಲ್ಲಾ ಕಾಮಗಾರಿಗಳಿಗೆ ವೇಗ ನೀಡಬೇಕಾಗಿದೆ. ವಿಶೇಷವಾಗಿ ಬರುವ ಮುಂದಿನ ಶೈಕ್ಷಣಿಕ ವರ್ಷಾರಂಭದಲ್ಲೇ ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಆರಂಭಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಬೇಕು ಎಂದು ಹೋರಾಟ ಸಮಿತಿ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದೆ.
ವಿಜಯಪುರ ಜಿಲ್ಲೆಯ ಜನರ ಬಹುದಿನಗಳ ಕನಸಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಶೀಘ್ರದಲ್ಲೇ ಕಾರ್ಯಾರಂಭಗೊಳ್ಳುವುದರಿಂದ ಜಿಲ್ಲೆಯ ವೈದ್ಯಕೀಯ ಶಿಕ್ಷಣ, ಆರೋಗ್ಯ ಸೇವೆ ಹಾಗೂ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯಕ್ಕೆ ಹೊಸ ಬಲ ದೊರೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿಯ ಸದಸ್ಯರಾದ ಅಕ್ರಮ್ ಮಾಶಾಳ್ಕರ್, ನೀಲಂಬಿಕಾ ಬಿರಾದಾರ್, ಭೋಗೇಶ್ ಸೋಲಾಪುರ್, ಲಕ್ಷ್ಮಣ್ ಹಂದರಾಳ್, ಗಿರೀಶ್ ಕಲಘಟಗಿ, ಜಗದೇವ್ ಸೂರ್ಯವಂಶಿ, ಬಾಳು ಜೇವೂರ್, ಬಿ.ಎಸ್. ಬೀರಕಬ್ಬಿ, ಮಲ್ಲಿಕಾರ್ಜುನ್ ಎಚ್.ಟಿ., ಶ್ರೀನಾಥ್ ಪೂಜಾರಿ, ಡಾ. ಎಂ.ಆರ್. ಗುರಿಕಾರ್, ಸಿದ್ದರಾಮ್ ಹಳ್ಳೂರ್, ಸುರೇಶ್ ಜಿ.ಬಿ., ಸುರೇಶ್ ಬಿಜಾಪುರ, ಲಲಿತಾ ಬಿಜ್ಜರಗಿ, ಲಕ್ಷ್ಮಣ್ ಕಂಬಾಗಿ, ಲಿಂಗರಾಜ್ ಬಿದರಕುಂದಿ, ಸಂತೋಷ್ ನಾಯಕ್, ಬಾಬಾಸಾಹೇಬ್ ಹತ್ತರಕಿಹಾಳ್, ಜ್ಯೋತಿ ಮಿಣಜಿಗಿ, ಸುಶೀಲಾ ಮಿಣಜಿಗಿ, ಭಾಗ್ಯ ಗಡದಿನ್ನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು (0)
ಕಾಮೆಂಟ್ ಮಾಡಲು ಲಾಗಿನ್ ಮಾಡಿ.
ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ!
