ಆಯುರ್ವೇದ ಕ್ಷೇತ್ರದಲ್ಲಿ ಡಾ. ನಾಗರಾಜ್ ಕಾಮತ್ ಅವರ 6 ರು ವಿಶಿಷ್ಟ ದಾಖಲೆಗಳನ್ನು ಸಾಧಿಸಿದ್ದಾರೆ.
ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಅಸೋಸಿಯೇಟ್ ಪ್ರೊಫೆಸರ್ ಡಾ. ನಾಗರಾಜ್ ಕಾಮತ್ ಅವರು ಆಯುರ್ವೇದ ಶಿಕ್ಷಣ, ಸಂಶೋಧನೆ ಮತ್ತು ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರ ‘ಸುಚಿತ್ರ ಕ್ರಿಯಾಶರೀರ’ ಕೃತಿಗೆ ವಿಶ್ವದ ಮೊದಲ ಬಣ್ಣದ ಕ್ರಿಯಾಶರೀರ ಅಟ್ಲಸ್ ಎಂಬ ದಾಖಲೆ ಮಾನ್ಯತೆ ದೊರೆತಿದೆ.
ಇದಕ್ಕೂ ಮುನ್ನ ಅವರು ರೂಪಿಸಿದ 'ಕ್ರಿಯಾಸ್ಪರ್ಶಮ್’ ಆಯುರ್ವೇದ ಕಲಿಕಾ ಆ್ಯಪ್‌ಗೂ ವಿವಿಧ ವಿಶ್ವ ದಾಖಲೆ ಸಂಸ್ಥೆಗಳಿಂದ ಮಾನ್ಯತೆ ಲಭಿಸಿದೆ. ಅಲ್ಲದೆ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 50 ಸಂಶೋಧನಾ ಮತ್ತು ವಿಮರ್ಶಾ ಲೇಖನಗಳನ್ನು ಪ್ರಕಟಿಸಿರುವ ಸಾಧನೆಯೂ ಅವರ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆಯುರ್ವೇದದ ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ಡಿಜಿಟಲ್ ಮತ್ತು ದೃಶ್ಯಾಧಾರಿತ ಶಿಕ್ಷಣ ಮಾಧ್ಯಮಗಳೊಂದಿಗೆ ಸಂಯೋಜಿಸಿ, ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಸುಲಭವಾಗಿ ತಲುಪಿಸುವಲ್ಲಿ ಡಾ. ನಾಗರಾಜ್ ಕಾಮತ್ ಅವರ ಕೊಡುಗೆ ಗಮನಾರ್ಹವಾಗಿದೆ.
ಹಾಸನ ಸೇಪ್ 03 :ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಹಾಸನದ ಕ್ರಿಯಾಶರೀರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ನಾಗರಾಜ್ ಕಾಮತ್ ಅವರು ಆಯುರ್ವೇದ ಶಿಕ್ಷಣ, ಸಂಶೋಧನೆ ಹಾಗೂ ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವು ಗಮನಾರ್ಹ ಸಾಧನೆಗಳನ್ನು ಮಾಡಿದ್ದು, ವಿವಿಧ ದಾಖಲೆ ಸಂಸ್ಥೆಗಳಿಂದ ಮಾನ್ಯತೆ ಪಡೆದಿದ್ದಾರೆ.
ಅವರ ‘ಸುಚಿತ್ರ ಕ್ರಿಯಾಶರೀರ’ ಕೃತಿಗೆ ವಿಶ್ವದ ಮೊದಲ ಬಣ್ಣದ ಕ್ರಿಯಾಶರೀರ ಅಟ್ಲಸ್ ಎಂಬ ದಾಖಲೆಯ ಮಾನ್ಯತೆ ದೊರೆತಿದೆ. ಆಯುರ್ವೇದ ಕ್ರಿಯಾಶರೀರದ ಮೂಲಭೂತ ಹಾಗೂ ಅನ್ವಯಿಕ ಪರಿಕಲ್ಪನೆಗಳನ್ನು ಬಣ್ಣದ ಚಿತ್ರಗಳು ಮತ್ತು ದೃಶ್ಯಾಧಾರಿತ ವಿವರಣೆಗಳ ಮೂಲಕ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಈ ಕೃತಿಯಲ್ಲಿ ಪ್ರಸ್ತುತಪಡಿಸಲಾಗಿದೆ. ಈ ಸಾಧನೆ 2026ರ ಫೆಬ್ರವರಿ 21ರಂದು ಹಾಸನದಲ್ಲಿ ದಾಖಲಾಗಿರುವುದಾಗಿ ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದಕ್ಕೂ ಮುನ್ನ ಡಾ. ಕಾಮತ್ ಅವರು ‘ಕ್ರಿಯಾಸ್ಪರ್ಶಮ್’ ಎಂಬ ಆಯುರ್ವೇದ ಕ್ರಿಯಾಶರೀರದ ವಿವರವಾದ ಕಲಿಕಾ ಆ್ಯಪ್‌ನ್ನು ರೂಪಿಸಿ 2018ರ ಮಾರ್ಚ್ 16ರಂದು ಬಿಡುಗಡೆ ಮಾಡಿದ್ದರು. ಪದವಿ ಮತ್ತು ಸ್ನಾತಕೋತ್ತರ ಆಯುರ್ವೇದ ವಿದ್ಯಾರ್ಥಿಗಳ ಶೈಕ್ಷಣಿಕ ಅಧ್ಯಯನಕ್ಕೆ ನೆರವಾಗುವ ಉದ್ದೇಶದಿಂದ ರೂಪಿಸಲಾದ ಈ ಆ್ಯಪ್‌ಗೆ ವಿವಿಧ ದಾಖಲೆ ಸಂಸ್ಥೆಗಳಿಂದ ಮಾನ್ಯತೆ ದೊರೆತಿದೆ.
ಅಂತರರಾಷ್ಟ್ರೀಯ ದಾಖಲೆಗಳ ಪುಸ್ತಕದ ಪ್ರಮಾಣಪತ್ರದ ಪ್ರಕಾರ, ಡಾ. ನಾಗರಾಜ್ ಕಾಮತ್ ಅವರು ಆಯುರ್ವೇದ ಶರೀರಶಾಸ್ತ್ರದ ವಿವರವಾದ ಕಲಿಕಾ ಆ್ಯಪ್‌ನ ಅತ್ಯಂತ ಕಿರಿಯ ಲೇಖಕರಾಗಿ 2018ರ ಮಾರ್ಚ್ 18ರಂದು ಹಾಸನದಲ್ಲಿ ದಾಖಲೆ ನಿರ್ಮಿಸಿದ್ದಾರೆ. ಆಗ ಅವರ ವಯಸ್ಸು 28 ವರ್ಷ 10 ತಿಂಗಳು 8 ದಿನಗಳು ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕಲಾಂ ಅವರ ವಿಶ್ವ ದಾಖಲೆಗಳು ಹಾಗೂ ವಜ್ರ ವಿಶ್ವ ದಾಖಲೆಗಳ ಸಂಸ್ಥೆಗಳೂ ‘ಕ್ರಿಯಾಸ್ಪರ್ಶಮ್’ ಆ್ಯಪ್‌ನ ಸಾಧನೆಯನ್ನು ಗುರುತಿಸಿವೆ.
ಸಂಶೋಧನಾ ಕ್ಷೇತ್ರದಲ್ಲಿಯೂ ಡಾ. ಕಾಮತ್ ಅವರ ಕೊಡುಗೆ ಗಮನಾರ್ಹವಾಗಿದೆ. ಭಾರತ ದಾಖಲೆಗಳ ಪುಸ್ತಕ ಹಾಗೂ ಏಷ್ಯಾ ದಾಖಲೆಗಳ ಪುಸ್ತಕದ ಪ್ರಮಾಣಪತ್ರಗಳ ಪ್ರಕಾರ, 2013ರ ಮಾರ್ಚ್ 15ರಿಂದ 2015ರ ಜನವರಿ 15ರವರೆಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಆಯುರ್ವೇದ ಸಂಶೋಧನಾ ಹಾಗೂ ವಿಮರ್ಶಾ ನಿಯತಕಾಲಿಕೆಗಳಲ್ಲಿ 50 ಸಂಶೋಧನಾ ಮತ್ತು ವಿಮರ್ಶಾ ಲೇಖನಗಳನ್ನು ಪ್ರಕಟಿಸಿರುವ ಸಾಧನೆಗೆ ಮಾನ್ಯತೆ ದೊರೆತಿದೆ.
ಆಯುರ್ವೇದದ ಮೂಲಭೂತ ವಿಷಯವಾದ ಕ್ರಿಯಾಶರೀರವನ್ನು ಡಿಜಿಟಲ್ ತಂತ್ರಜ್ಞಾನ, ದೃಶ್ಯಾಧಾರಿತ ಶಿಕ್ಷಣ ಮತ್ತು ಸಂಶೋಧನೆಯೊಂದಿಗೆ ಸಂಯೋಜಿಸುವ ಮೂಲಕ ಡಾ. ನಾಗರಾಜ್ ಕಾಮತ್ ಅವರು ಆಯುರ್ವೇದ ಶಿಕ್ಷಣಕ್ಕೆ ಹೊಸ ಆಯಾಮ ನೀಡಿದ್ದಾರೆ. ಅವರ ಈ ಸಾಧನೆಗಳು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಹಾಸನದ ಶೈಕ್ಷಣಿಕ ಹಾಗೂ ಸಂಶೋಧನಾ ಕ್ಷೇತ್ರದ ಹೆಗ್ಗಳಿಕೆಯನ್ನು ಮತ್ತಷ್ಟು ಹೆಚ್ಚಿಸಿವೆ.